ದೆಹಲಿ ಸಾರಿಗೆಗೆ ಹಸಿರು ಹೆಜ್ಜೆ: 200 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ, 5,000ರ ಗಡಿ ದಾಟಿದ ಇ-ಬಸ್‌ಗಳ ಸಂಖ್ಯೆ

2 Min Read
2 Min Read

ನವದೆಹಲಿ: ದೆಹಲಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪರಿಸರ ಸ್ನೇಹಿ ಹಾಗೂ ಸುರಕ್ಷಿತವಾಗಿಸುವ ನಿಟ್ಟಿನಲ್ಲಿ 200 ಹೊಸ ಶೂನ್ಯ-ಹೊರಸೂಸುವಿಕೆ ಎಲೆಕ್ಟ್ರಿಕ್ ಬಸ್‌ಗಳನ್ನು ಸಾರಿಗೆ ಪಡೆಯಿಗೆ ಸೇರ್ಪಡೆಗೊಳಿಸಲಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಣ್ಜಿತ್ ಸಿಂಗ್ ಸಂಧು ಮತ್ತು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೆಹಲಿ ವಿಶ್ವವಿದ್ಯಾಲಯದ ಕ್ರೀಡಾ ಸಂಕೀರ್ಣದಿಂದ ಹೊಸ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು.

ಈ ಹೊಸ ಬಸ್‌ಗಳ ಸೇರ್ಪಡೆಯೊಂದಿಗೆ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 5,000ರ ಗಡಿ ದಾಟಿದೆ.

ಈ ಸಂದರ್ಭದಲ್ಲಿ ಮಾತನಾಡಿದ ತರಣ್ಜಿತ್ ಸಿಂಗ್ ಸಂಧು, ಎಲೆಕ್ಟ್ರಿಕ್ ಬಸ್‌ಗಳ ವಿಸ್ತರಣೆ ಪರಿಸರ ಸ್ನೇಹಿ ಕ್ರಮವಾಗಿದ್ದು, ಮುಖ್ಯವಾಗಿ ನಾಗರಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾಗುತ್ತಿರುವ ಜನಪರ ಉಪಕ್ರಮವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ರೇಖಾ ಗುಪ್ತಾ ಮಾತನಾಡಿ, ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಸ್ವಚ್ಛ, ಸುರಕ್ಷಿತ ಮತ್ತು ಅನುಕೂಲಕರವಾಗಿಸುವುದು ಎಂದರು. ದೆಹಲಿಯಲ್ಲಿ ಈಗಾಗಲೇ 5,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿದ್ದು, ಒಟ್ಟಾರೆ ಬಸ್‌ಗಳ ಸಂಖ್ಯೆ ಸುಮಾರು 6,800ಕ್ಕೆ ತಲುಪಿದೆ ಎಂದು ತಿಳಿಸಿದರು.

2028–29ರ ವೇಳೆಗೆ 14,000 ಬಸ್‌ಗಳ ಗುರಿ

ಕಡಿಮೆ ನೆಲಮಟ್ಟದ (Low-floor) ಹಾಗೂ ಹವಾನಿಯಂತ್ರಿತ ಈ ಎಲೆಕ್ಟ್ರಿಕ್ ಬಸ್‌ಗಳು ದೆಹಲಿ ಸಾರಿಗೆ ನಿಗಮದ (DTC) ಸಂಪೂರ್ಣ ಬಸ್ ಪಡೆಯನ್ನು ಹಂತ ಹಂತವಾಗಿ ವಿದ್ಯುತ್ ಚಾಲಿತವಾಗಿಸುವ ಸರ್ಕಾರದ ಯೋಜನೆಯ ಭಾಗವಾಗಿವೆ.

2028–29ರ ವೇಳೆಗೆ ಒಟ್ಟು ಬಸ್ ಪಡೆಯನ್ನು ಸುಮಾರು 14,000ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ದೆಹಲಿ–ಕರ್ನಾಲ್ ಇ-ಬಸ್ ಸೇವೆ ಆರಂಭ

ಇದೇ ಸಂದರ್ಭದಲ್ಲಿ ಹೊಸ ದೆಹಲಿ–ಕರ್ನಾಲ್ ಅಂತರರಾಜ್ಯ ಎಲೆಕ್ಟ್ರಿಕ್ ಬಸ್ ಸೇವೆಯನ್ನೂ ಆರಂಭಿಸಲಾಯಿತು. ಹವಾನಿಯಂತ್ರಿತ ಐದು ಎಲೆಕ್ಟ್ರಿಕ್ ಬಸ್‌ಗಳು ಪ್ರತಿದಿನ ಎರಡೂ ದಿಕ್ಕುಗಳಲ್ಲಿ ತಲಾ 10 ಟ್ರಿಪ್‌ಗಳನ್ನು ನಡೆಸಲಿವೆ.

ಕಾಶ್ಮೀರ್ ಗೇಟ್‌ನಿಂದ ಕರ್ನಾಲ್‌ವರೆಗೆ ಪ್ರಯಾಣ ದರವನ್ನು ಸುಮಾರು ₹212 ಎಂದು ನಿಗದಿಪಡಿಸಲಾಗಿದೆ. ಈ ಮಾರ್ಗವು ಸಿಂಘು ಗಡಿ, ಮುರ್ತಲ್, ಪಾಣಿಪತ್ ಸೇರಿದಂತೆ ಪ್ರಮುಖ ಪ್ರದೇಶಗಳ ಮೂಲಕ ಸಾಗಲಿದೆ.

ಮಹಿಳೆಯರ ಸುರಕ್ಷತೆಗೆ ‘ಲೇಡೀಸ್ ಸ್ಪೆಷಲ್’ ಇ-ಬಸ್

ಮಹಿಳೆಯರಿಗೆ ಸುರಕ್ಷಿತ ಹಾಗೂ ಗೌರವಯುತ ಸಾರ್ವಜನಿಕ ಸಾರಿಗೆ ಒದಗಿಸುವ ಉದ್ದೇಶದಿಂದ 56 ವಿಶೇಷ ಲೇಡೀಸ್ ಸ್ಪೆಷಲ್ ಇ-ಬಸ್ ಸೇವೆಗಳನ್ನು ಆರಂಭಿಸಲಾಗಿದೆ.

ಇವುಗಳಲ್ಲಿ ಹೆಚ್ಚಿನ ಬೇಡಿಕೆಯಿರುವ 15 ಮಾರ್ಗಗಳಲ್ಲಿ 30 ಟ್ರಿಪ್‌ಗಳು ಹಾಗೂ 13 ಮಾರ್ಗಗಳಲ್ಲಿ ವಿಶ್ವವಿದ್ಯಾಲಯದ ಮಹಿಳಾ ಪ್ರಯಾಣಿಕರಿಗಾಗಿ 26 ವಿಶೇಷ ಟ್ರಿಪ್‌ಗಳು ಸೇರಿವೆ.

ಈ ಬಸ್‌ಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಪ್ರಯಾಣಿಕರ ತುರ್ತು ಸುರಕ್ಷತೆಗಾಗಿ ಪ್ಯಾನಿಕ್ ಬಟನ್‌ಗಳನ್ನು ದೆಹಲಿ ಪೊಲೀಸರ 112 ತುರ್ತು ಪ್ರತಿಕ್ರಿಯಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗುತ್ತದೆ.

Share This Article