ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ವಲಯ ಮಂಡಳಿಯ 31ನೇ ಸಭೆ ಇಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರ ಮತ್ತು ದಕ್ಷಿಣ ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡುವೆ ಸಮನ್ವಯ ಅಗತ್ಯವಿರುವ ಹಲವು ಪ್ರಮುಖ ವಿಷಯಗಳು ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ವಲಯ ಮಂಡಳಿಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಜೊತೆಗೆ ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳು ಸದಸ್ಯರಾಗಿವೆ.
ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಅಂತರರಾಜ್ಯ ಮಂಡಳಿ ಕಾರ್ಯದರ್ಶಾಲಯ ಸಭೆಯನ್ನು ಆಯೋಜಿಸುತ್ತಿದ್ದು, ತಮಿಳುನಾಡು ಸರ್ಕಾರ ಆತಿಥ್ಯ ವಹಿಸಿದೆ. ಸದಸ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ಗಳು ಹಾಗೂ ಆಡಳಿತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ರಾಜ್ಯದಿಂದ ಇಬ್ಬರು ಹಿರಿಯ ಸಚಿವರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಭೆಗೆ ಮುನ್ನ ಕೇಂದ್ರ ಗೃಹ ಸಚಿವಾಲಯವು ಪ್ರಧಾನಿ ನರೇಂದ್ರ ಮೋದಿ ಅವರ ‘ಟೀಮ್ ಭಾರತ್’ (TEAM BHARAT) ಪರಿಕಲ್ಪನೆಯನ್ನು ಉಲ್ಲೇಖಿಸಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಆಧರಿಸಿದ ಈ ಪರಿಕಲ್ಪನೆಯು ವಲಯ ಮಂಡಳಿಗಳ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ.
ವಲಯ ಮಂಡಳಿಗಳು ಸಲಹಾ ಸಂಸ್ಥೆಗಳಾಗಿದ್ದರೂ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಾಗೂ ರಾಜ್ಯಗಳ ಪರಸ್ಪರ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಮುಖ ವೇದಿಕೆಗಳಾಗಿ ರೂಪುಗೊಂಡಿವೆ ಎಂದು ಗೃಹ ಸಚಿವಾಲಯ ಹೇಳಿದೆ.
ಅಂತಾರಾಜ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಕೇಂದ್ರ–ರಾಜ್ಯ ಸಮನ್ವಯವನ್ನು ಹೆಚ್ಚಿಸುವುದು ಮತ್ತು ಪರಸ್ಪರ ಸಹಕಾರವನ್ನು ಉತ್ತೇಜಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ವಲಯ ಮಂಡಳಿಗಳು ಮಹತ್ವದ ಪಾತ್ರ ವಹಿಸುತ್ತಿವೆ.


