ಸಿಂಗಾಪುರ: ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 4ನೇ ಭಾರತ–ಸಿಂಗಾಪುರ ಸಚಿವರ ಸುತ್ತಮೇಜಿನ ಸಭೆ (ISMR) ಇಂದು ಸಿಂಗಾಪುರದಲ್ಲಿ ನಡೆಯಲಿದೆ.
ಭಾರತದ ಪರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ವಾಣಿಜ್ಯ, ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಗಳ ರಾಜ್ಯ ಸಚಿವ ಜಿತಿನ್ ಪ್ರಸಾದ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಹೊಸ ಹಾಗೂ ಉದಯೋನ್ಮುಖ ಕ್ಷೇತ್ರಗಳಲ್ಲಿ ಭಾರತ–ಸಿಂಗಾಪುರ ಸಹಕಾರವನ್ನು ಮುನ್ನಡೆಸುವ ಪ್ರಮುಖ ವೇದಿಕೆಯಾಗಿ ISMR ಕಾರ್ಯನಿರ್ವಹಿಸುತ್ತಿದೆ. ಇದರ ಮೊದಲ ಸಭೆ 2022ರ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ, ಎರಡನೇ ಸಭೆ 2024ರ ಆಗಸ್ಟ್‌ನಲ್ಲಿ ಸಿಂಗಾಪುರದಲ್ಲಿ ಹಾಗೂ ಮೂರನೇ ಸಭೆ 2025ರ ಆಗಸ್ಟ್‌ನಲ್ಲಿ ನವದೆಹಲಿಯಲ್ಲಿ ನಡೆದಿತ್ತು.
ಹಿಂದಿನ ಸಭೆಗಳಲ್ಲಿ ಮುಂದುವರಿದ ಉತ್ಪಾದನಾ ಕ್ಷೇತ್ರ, ಸಂಪರ್ಕ ವ್ಯವಸ್ಥೆ, ಡಿಜಿಟಲೀಕರಣ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರ, ಕೌಶಲ್ಯಾಭಿವೃದ್ಧಿ ಹಾಗೂ ಸುಸ್ಥಿರತೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆದಿತ್ತು. ಈ ಚರ್ಚೆಗಳು ಭಾರತ–ಸಿಂಗಾಪುರ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಮಾರ್ಗಸೂಚಿ ರೂಪಿಸಲು ಪ್ರಮುಖ ಆಧಾರವಾಗಿವೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಮಾರ್ಗಸೂಚಿಯನ್ನು ಅನಾವರಣಗೊಳಿಸಲಾಗಿತ್ತು.
4ನೇ ISMR ಸಭೆಯಲ್ಲಿ ನಡೆಯುತ್ತಿರುವ ವಿವಿಧ ಸಹಕಾರ ಯೋಜನೆಗಳ ಪ್ರಗತಿಯನ್ನು ಉಭಯ ದೇಶಗಳು ಪರಿಶೀಲಿಸಲಿದ್ದು, ಭಾರತ–ಸಿಂಗಾಪುರ ನಡುವಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಹೊಸ ಅವಕಾಶಗಳನ್ನು ಗುರುತಿಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದೇ ಸಂದರ್ಭದಲ್ಲಿ ಪ್ರಮುಖ ಉದ್ಯಮಿಗಳ ಕಾರ್ಯತಂತ್ರ ಮತ್ತು ಸಲಹಾ ವೇದಿಕೆಯಾಗಿರುವ 4ನೇ ಭಾರತ–ಸಿಂಗಾಪುರ ಬಿಸಿನೆಸ್ ರೌಂಡ್‌ಟೇಬಲ್ ಸಭೆಯೂ ನಡೆಯಲಿದೆ.
ಇದಕ್ಕೂ ಮುನ್ನ ಸಿಂಗಾಪುರಕ್ಕೆ ಆಗಮಿಸಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ತಮ್ಮ ಸಿಂಗಾಪುರದ ಸಹವರ್ತಿ ವಿವಿಯನ್ ಬಾಲಕೃಷ್ಣನ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವ ಕುರಿತು ಉಭಯ ನಾಯಕರು ವಿಸ್ತೃತ ಚರ್ಚೆ ನಡೆಸಿದರು.
ಬಳಿಕ ಡಾ. ಜೈಶಂಕರ್ ಅವರು ವಿವಿಯನ್ ಬಾಲಕೃಷ್ಣನ್ ಅವರೊಂದಿಗೆ ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್‌ನ ನೂತನ ಚಾನ್ಸರಿ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನೂತನ ಸಂಕೀರ್ಣವು ಭಾರತ–ಸಿಂಗಾಪುರ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಹೊಸ ಯುಗವನ್ನು ಪ್ರತಿಬಿಂಬಿಸುವುದರ ಜೊತೆಗೆ, ಸಿಂಗಾಪುರದಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡುವ ಸೇವೆಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ಜೈಶಂಕರ್ ವ್ಯಕ್ತಪಡಿಸಿದರು.


