ಅಕ್ರಮಗಳ ಆರೋಪ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆಯೇ ಜಾರ್ಖಂಡ್ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, 2014ರಿಂದ ನಡೆದಿರುವ 44 ನೇಮಕಾತಿ ಪರೀಕ್ಷೆಗಳನ್ನು ರದ್ದುಪಡಿಸಿದೆ.
ರಾಜ್ಯ ಸರ್ಕಾರ ಸೋಮವಾರ ರಾತ್ರಿ ಎಂಟು ಅಧಿಸೂಚನೆಗಳನ್ನು ಹೊರಡಿಸಿ ರದ್ದುಗೊಂಡ ಪರೀಕ್ಷೆಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ನಡೆಸಿದ ಪರೀಕ್ಷೆಗಳ ಜೊತೆಗೆ, ಹೊರಗುತ್ತಿಗೆ ಸಂಸ್ಥೆಯಾದ TSR Data Processing Pvt Ltd (TDPL) ಮೂಲಕ ನಡೆಸಲಾದ ಪರೀಕ್ಷೆಗಳೂ ಸೇರಿವೆ.
ರದ್ದುಗೊಂಡ ಪರೀಕ್ಷೆಗಳಲ್ಲಿ ಔಷಧ ನಿರೀಕ್ಷಕರು, ಸಹಾಯಕ ಪ್ರಾಧ್ಯಾಪಕರು, ಉಪ ಜಿಲ್ಲಾಧಿಕಾರಿಗಳು, ದಂತ ವೈದ್ಯರು, ಸಹಾಯಕ ಎಂಜಿನಿಯರ್‌ಗಳು, ಸಿವಿಲ್ ನ್ಯಾಯಾಧೀಶರು, ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರು ಹಾಗೂ ಅರಣ್ಯ ವಲಯಾಧಿಕಾರಿಗಳ ನೇಮಕಾತಿ ಪರೀಕ್ಷೆಗಳು ಪ್ರಮುಖವಾಗಿವೆ.
ಇದಲ್ಲದೆ, ಸರ್ಕಾರಿ ಪಾಲಿಟೆಕ್ನಿಕ್‌ಗಳ ಉಪನ್ಯಾಸಕರು, ಹಿರಿಯ ವೈಜ್ಞಾನಿಕ ಅಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಹಲವು ಆಡಳಿತಾತ್ಮಕ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನೂ ರದ್ದುಪಡಿಸಲಾಗಿದೆ.
JPSC ಮತ್ತು JSSCಗೆ ಸಂಬಂಧಿಸಿದ ನೇಮಕಾತಿ ಅಕ್ರಮ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯ ರಚಿಸುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಅಲ್ಲದೆ, JPSC ಮತ್ತು JSSCಗಳಲ್ಲಿ ಆಂತರಿಕ ವಿಜಿಲೆನ್ಸ್ ಘಟಕವನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
JPSC ಮತ್ತು JSSCನಲ್ಲಿ ಸುಧಾರಣೆಗಳ ಕುರಿತು ಅಧ್ಯಯನ ನಡೆಸಲು ಹಿರಿಯ ಐಎಎಸ್ ಅಧಿಕಾರಿ ಅಮಿತಾಭ್ ಕೌಶಲ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು ಎರಡು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸರ್ಕಾರವು ಪ್ರತಿಭಟನಾನಿರತ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದ್ದ JSSC–Combined Graduate Level (CGL) ಪರೀಕ್ಷೆಯನ್ನೂ ರದ್ದುಪಡಿಸುವುದಾಗಿ ಘೋಷಿಸಿತ್ತು. ಇದರೊಂದಿಗೆ TDPL ಮೂಲಕ ನಡೆಸಲಾಗಿದ್ದ ಎಲ್ಲಾ ಪರೀಕ್ಷೆಗಳು ಹಾಗೂ ಆ ಸಂಸ್ಥೆ ಪ್ರಕಟಿಸಿದ್ದ ಫಲಿತಾಂಶಗಳನ್ನೂ ರದ್ದುಗೊಳಿಸಲಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ.


