ಮುಂಬೈ: ಹಾಲಿವುಡ್‌ನ ಬಹುನಿರೀಕ್ಷಿತ ಸೂಪರ್ ಹೀರೋ ಸಿನಿಮಾ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಭಾರತದಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದ್ದು, ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿ ₹100 ಕೋಟಿ ನೆಟ್ ಕಲೆಕ್ಷನ್ ಗಡಿ ದಾಟಿದೆ ಎಂದು ವರದಿಗಳು ತಿಳಿಸಿವೆ.
ಟಾಮ್ ಹಾಲೆಂಡ್ ಅಭಿನಯದ ಈ ಸಿನಿಮಾಗೆ ಭಾರತದಲ್ಲಿ ಭಾರೀ ನಿರೀಕ್ಷೆ ಮೂಡಿದ್ದ ಹಿನ್ನೆಲೆಯಲ್ಲಿ ಮೊದಲ ದಿನವೇ ಚಿತ್ರ ಭರ್ಜರಿ ಗಳಿಕೆ ಕಂಡಿದೆ. ಮೊದಲ ದಿನ ಭಾರತದಲ್ಲಿ ಸುಮಾರು ₹73.96 ಕೋಟಿ ಗ್ರಾಸ್ ಕಲೆಕ್ಷನ್ ದಾಖಲಿಸಿದೆ ಎನ್ನಲಾಗಿದೆ. ಹಿಂದಿ ಹಾಗೂ ಇಂಗ್ಲಿಷ್ ಆವೃತ್ತಿಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ಕಡೆ ಶೇ.100ರ ಸಮೀಪದ ಆಕ್ಯುಪೆನ್ಸಿ ದಾಖಲಾಗಿದೆ.
ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಎರಡನೇ ದಿನ ಚಿತ್ರವು ಸುಮಾರು ₹50 ಕೋಟಿ ನೆಟ್ ಹಾಗೂ ₹60 ಕೋಟಿ ಗ್ರಾಸ್ ಗಳಿಸಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ ₹109.95 ಕೋಟಿ, ಗ್ರಾಸ್ ಕಲೆಕ್ಷನ್ ₹131.47 ಕೋಟಿ ತಲುಪಿದೆ.
ಟಿಕೆಟ್ ಬುಕ್ಕಿಂಗ್ ಆ್ಯಪ್‌ಗಳಲ್ಲಿ ಚಿತ್ರಕ್ಕೆ ಭಾರೀ ಬೇಡಿಕೆ ಮುಂದುವರಿದಿದ್ದು, ವಾರಾಂತ್ಯದ ಬಳಿಕವೂ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ಇದೇ ವೇಗ ಮುಂದುವರಿದರೆ ನಾಲ್ಕನೇ ದಿನದ ವೇಳೆಗೆ ಸಿನಿಮಾ ₹200 ಕೋಟಿ ಗಡಿ ದಾಟುವ ಸಾಧ್ಯತೆ ಇದೆ ಎಂದು ವರದಿಗಳು ಅಂದಾಜಿಸಿವೆ.
ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್?
ಇಂಗ್ಲಿಷ್ ಆವೃತ್ತಿ ಚಿತ್ರದ ಒಟ್ಟು ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಇದುವರೆಗೆ ಸುಮಾರು ₹60.25 ಕೋಟಿ ನೆಟ್ ಗಳಿಸಿದೆ. ಹಿಂದಿ ಆವೃತ್ತಿ ಸುಮಾರು ₹39 ಕೋಟಿ ನೆಟ್ ಕಲೆಕ್ಷನ್ ಮಾಡಿದೆ.
ಪ್ರಾದೇಶಿಕ ಭಾಷೆಗಳ ಪೈಕಿ ತಮಿಳು ಹಾಗೂ ತೆಲುಗು ಆವೃತ್ತಿಗಳು ತಲಾ ₹5.25 ಕೋಟಿ ನೆಟ್ ಗಳಿಸಿವೆ ಎಂದು ವರದಿಯಾಗಿದೆ. ಇಂಗ್ಲಿಷ್ 3D ಆವೃತ್ತಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಶುಕ್ರವಾರ ಸರಾಸರಿ ಆಕ್ಯುಪೆನ್ಸಿ ಶೇ.49.31ರಷ್ಟಿತ್ತು. ರಾತ್ರಿ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಶೇ.66.78ಕ್ಕೆ ಏರಿಕೆಯಾಗಿದೆ.
‘ನೋ ವೇ ಹೋಮ್’ ಬಳಿಕದ ಕಥೆ
‘ಸ್ಪೈಡರ್-ಮ್ಯಾನ್: ನೋ ವೇ ಹೋಮ್’ ಚಿತ್ರದ ಮುಂದುವರಿದ ಕಥೆಯಾಗಿ ‘ಬ್ರ್ಯಾಂಡ್ ನ್ಯೂ ಡೇ’ ಮೂಡಿಬಂದಿದೆ. ಹಿಂದಿನ ಸಿನಿಮಾದ ಅಂತ್ಯದಲ್ಲಿ ಡಾಕ್ಟರ್ ಸ್ಟ್ರೇಂಜ್ ಮಾಡಿದ ಮಂತ್ರದ ಪರಿಣಾಮವಾಗಿ ಜಗತ್ತಿನ ಎಲ್ಲರೂ ಪೀಟರ್ ಪಾರ್ಕರ್ ಯಾರು ಎಂಬುದನ್ನು ಮರೆತುಬಿಡುತ್ತಾರೆ. ಇದರಲ್ಲಿ ಪೀಟರ್‌ನ ಆಪ್ತರಾದ ಎಂಜೆ ಮತ್ತು ನೆಡ್ ಕೂಡ ಸೇರಿದ್ದಾರೆ.
ಡೆಸ್ಟಿನ್ ಡ್ಯಾನಿಯಲ್ ಕ್ರೆಟನ್ ನಿರ್ದೇಶಿಸಿರುವ ಈ ಸಿನಿಮಾ ಅವರ ಎರಡನೇ ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್ (MCU) ಚಿತ್ರವಾಗಿದೆ. ಇದಕ್ಕೂ ಮೊದಲು ಅವರು ‘ಶಾಂಗ್-ಚಿ ಅಂಡ್ ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್’ ನಿರ್ದೇಶಿಸಿದ್ದರು.
ಚಿತ್ರದಲ್ಲಿ ಟಾಮ್ ಹಾಲೆಂಡ್ ಜೊತೆಗೆ ಝೆಂಡಯಾ, ಜೇಕಬ್ ಬ್ಯಾಟಲನ್, ಜಾನ್ ಬರ್ನ್ತಲ್, ಫ್ಲಾರೆನ್ಸ್ ಪಗ್, ಟ್ರಾಮೆಲ್ ಟಿಲ್‌ಮನ್, ಮರಿಸಾ ಟೋಮಿ ಹಾಗೂ ಮಾರ್ಕ್ ರಫಲೋ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


