ಬೆಂಗಳೂರು: ಕರ್ನಾಟಕದ ನೀಲಂ ಹಾಗೂ ತೊಟಾಪುರಿ ತಳಿಯ ಮಾವುಗಳನ್ನು ಮೊದಲ ಬಾರಿಗೆ ಮಾಲ್ಡೀವ್ಸ್ಗೆ ವಿಮಾನ ಮಾರ್ಗದ ಮೂಲಕ ರಫ್ತು ಮಾಡಲಾಗಿದ್ದು, ರಾಜ್ಯದ ಮಾವು ಬೆಳೆಗಾರರಿಗೆ ಹೊಸ ವಿದೇಶಿ ಮಾರುಕಟ್ಟೆಯ ಬಾಗಿಲು ತೆರೆದಿದೆ.
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಈ ಐತಿಹಾಸಿಕ ರಫ್ತಿಗೆ ನೆರವು ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಾರ, ಈ ರಫ್ತಿನಿಂದ ರೈತರಿಗೆ ಸಾಂಪ್ರದಾಯಿಕ ದೇಶೀಯ ಮಾರುಕಟ್ಟೆಗೆ ಹೋಲಿಸಿದರೆ ಶೇ.50ಕ್ಕೂ ಹೆಚ್ಚು ಹೆಚ್ಚುವರಿ ಆದಾಯ ದೊರೆತಿದೆ.
ಈ ರಫ್ತು ಕರ್ನಾಟಕದ ತಡಗಾಲದ (Late-season) ಮಾವಿನ ತಳಿಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಭಾರತದ ಮಾವು ರಫ್ತು ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಸಹಕಾರಿಯಾಗಲಿದೆ.
ನೀಲಂ ಮಾವು ತನ್ನ ಸಿಹಿ, ರಸಭರಿತ ತಿರುಳು ಮತ್ತು ಸುಗಂಧಕ್ಕೆ ಹೆಸರುವಾಸಿಯಾಗಿದ್ದು, ಸಿಹಿತಿಂಡಿಗಳು, ಸ್ಮೂಥಿಗಳು ಹಾಗೂ ವಿವಿಧ ಪಾನೀಯಗಳ ತಯಾರಿಕೆಗೆ ಹೆಚ್ಚು ಸೂಕ್ತವಾಗಿದೆ.
ತೊಟಾಪುರಿ ಮಾವು ತನ್ನ ವಿಶಿಷ್ಟ ಆಕಾರ, ಸಿಹಿ-ಹುಳಿ ರುಚಿ ಹಾಗೂ ತಾಜಾ ಹಣ್ಣಾಗಿ ಸೇವಿಸುವುದರ ಜೊತೆಗೆ ಸಂಸ್ಕರಿತ ಆಹಾರ ಉತ್ಪನ್ನಗಳ ತಯಾರಿಕೆಗೆ ವ್ಯಾಪಕವಾಗಿ ಬಳಕೆಯಾಗುವುದರಿಂದ ಜನಪ್ರಿಯವಾಗಿದೆ.
ಜೂನ್ ಅಂತ್ಯದಿಂದ ಜುಲೈ ಅಂತ್ಯದವರೆಗೆ ಕೊಯ್ಲಾಗುವ ಈ ತಡಗಾಲದ ಮಾವಿನ ತಳಿಗಳು, ಭಾರತದ ಮಾವು ರಫ್ತು ಅವಧಿಯನ್ನು ವಿಸ್ತರಿಸುವುದರೊಂದಿಗೆ ಜಾಗತಿಕ ಮಾರುಕಟ್ಟೆಯ ನಿರಂತರ ಬೇಡಿಕೆಯನ್ನು ಪೂರೈಸಲು ನೆರವಾಗಲಿವೆ.


