ನವದೆಹಲಿ: ಭಾರತೀಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ಜೀವಂತ ದಾನಿಯ (Live Donor) ಹೃದಯವನ್ನು ರೈಲಿನ ಮೂಲಕ ಯಶಸ್ವಿಯಾಗಿ ಸಾಗಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಜೀವ ರಕ್ಷಕ ಅಂಗವಾದ ಹೃದಯವನ್ನು ಸೂರತ್‌ನಿಂದ ಅಹಮದಾಬಾದ್‌ಗೆ ಮುಂಬೈ–ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಸುರಕ್ಷಿತವಾಗಿ ಮತ್ತು ನಿಗದಿತ ಸಮಯಕ್ಕೆ ತಲುಪಿಸಲಾಯಿತು.
ಈ ಹೃದಯವನ್ನು ಅಹಮದಾಬಾದ್‌ನ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ನಲ್ಲಿ ಅಂಗಾಂಗ ಕಸಿ (ಹೃದಯ ಕಸಿ) ಶಸ್ತ್ರಚಿಕಿತ್ಸೆಗಾಗಿ ಸಾಗಿಸಲಾಗಿತ್ತು.
ಹೃದಯವನ್ನು ತ್ವರಿತವಾಗಿ ಆಸ್ಪತ್ರೆಗೆ ತಲುಪಿಸುವ ಉದ್ದೇಶದಿಂದ ಅಹಮದಾಬಾದ್ ರೈಲು ನಿಲ್ದಾಣದಿಂದ ಯು.ಎನ್. ಮೆಹ್ತಾ ಆಸ್ಪತ್ರೆಯವರೆಗೆ ವಿಶೇಷ ‘ಗ್ರೀನ್ ಕಾರಿಡಾರ್’ ನಿರ್ಮಿಸಲಾಗಿತ್ತು. ಈ ಕಾರ್ಯವನ್ನು ರೈಲ್ವೆ ರಕ್ಷಣಾ ಪಡೆ (RPF) ಹಾಗೂ ಗುಜರಾತ್ ರಾಜ್ಯ ಪೊಲೀಸ್ ಸಮನ್ವಯದಲ್ಲಿ ಯಶಸ್ವಿಯಾಗಿ ನಿರ್ವಹಿಸಿವೆ.
ಈ ಕಾರ್ಯಾಚರಣೆಯಿಂದ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಾವುದೇ ವಿಳಂಬವಿಲ್ಲದೆ ಆರಂಭಿಸಲು ಸಾಧ್ಯವಾಯಿತು.
ಈ ಕುರಿತು ರೈಲ್ವೆ ಸಚಿವಾಲಯ ಪ್ರಕಟಣೆ ನೀಡಿ, ಭಾರತೀಯ ರೈಲ್ವೆ, ರೈಲ್ವೆ ರಕ್ಷಣಾ ಪಡೆ, ಗುಜರಾತ್ ಪೊಲೀಸ್ ಹಾಗೂ ವೈದ್ಯಕೀಯ ತಂಡಗಳ ನಡುವಿನ ಅತ್ಯುತ್ತಮ ಸಮನ್ವಯವು ಜೀವ ರಕ್ಷಕ ಆರೋಗ್ಯ ಸೇವೆಗಳಲ್ಲಿ ಭಾರತೀಯ ರೈಲ್ವೆಯ ಪಾತ್ರ ಮತ್ತಷ್ಟು ವಿಸ್ತರಿಸುತ್ತಿರುವುದಕ್ಕೆ ಉತ್ತಮ ಉದಾಹರಣೆ ಎಂದು ತಿಳಿಸಿದೆ.


