ಬೆಂಗಳೂರು: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಸಿನಿರಂಗದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ಭವ್ಯತೆ, ದೃಶ್ಯ ವೈಭವ ಮತ್ತು ಪಾತ್ರಗಳ ನಿರೂಪಣೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದು, ಇದೀಗ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ಯಶ್ ಅಭಿನಯಿಸಿರುವ ರಾವಣನ ಪಾತ್ರವನ್ನು “ಅನ್ಬಿಲೀವಬಲ್” ಎಂದು ಬಣ್ಣಿಸಿದ್ದಾರೆ. ಈ ಪಾತ್ರಕ್ಕೆ ಯಶ್ಗಿಂತ ಸೂಕ್ತ ಆಯ್ಕೆ ಮತ್ತಾರೂ ಇರಲಾರರು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ ಚಿತ್ರದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿಯ ಈ ಮೆಚ್ಚುಗೆಯು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಯಶ್ ಅಭಿಮಾನಿಗಳು ಅದನ್ನು ಭಾರೀ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
‘ರಾಮಾಯಣ’ ಟ್ರೇಲರ್ ಬಿಡುಗಡೆಯಾದ ನಂತರ ಯಶ್ ಅವರ ರಾವಣನ ಲುಕ್, ಅಭಿನಯ ಮತ್ತು ಪರದೆಯ ಮೇಲಿನ ವ್ಯಕ್ತಿತ್ವಕ್ಕೆ ಸಿನಿಪ್ರೇಕ್ಷಕರು ಹಾಗೂ ಹಲವು ಗಣ್ಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.


