ನವದೆಹಲಿ: ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದೆಹಲಿಯ ಖಾಸಗಿ ಹೋಟೆಲ್ವೊಂದರ ಪರವಾನಗಿಯನ್ನು ತಕ್ಷಣದಿಂದಲೇ 15 ದಿನಗಳ ಕಾಲ ಅಮಾನತುಗೊಳಿಸಿದೆ.
ಎಫ್ಎಸ್ಎಸ್ಎಐ ತನ್ನ ಸಾಮಾಜಿಕ ಜಾಲತಾಣದ ಪ್ರಕಟಣೆಯಲ್ಲಿ, ಹೋಟೆಲ್ನಲ್ಲಿ ಗುಣಮಟ್ಟ ಕಳೆದುಕೊಂಡ ಅಡುಗೆ ಎಣ್ಣೆಯನ್ನು ಬಳಸಿರುವುದು ಹಾಗೂ ಆಹಾರದ ಗುಣಮಟ್ಟ ಕಳಪೆಯಾಗಿರುವುದು ಸೇರಿದಂತೆ ಹಲವು ಗಂಭೀರ ಉಲ್ಲಂಘನೆಗಳು ಪತ್ತೆಯಾಗಿರುವುದಾಗಿ ತಿಳಿಸಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಪರವಾನಗಿ ಅಮಾನತಿನ ಅವಧಿಯಲ್ಲಿ ಸಂಬಂಧಿತ ಹೋಟೆಲ್ ಎಲ್ಲ ಆಹಾರ ವ್ಯವಹಾರ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಎಫ್ಎಸ್ಎಸ್ಎಐ ನಿರ್ದೇಶಿಸಿದೆ.
ಜೊತೆಗೆ, ಹೋಟೆಲ್ಗೆ 15 ದಿನಗಳೊಳಗೆ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ಆಹಾರ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ನಿಯಮಗಳನ್ನು ಪಾಲಿಸದಿದ್ದರೆ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು ಎಂದು ಎಫ್ಎಸ್ಎಸ್ಎಐ ಎಚ್ಚರಿಕೆ ನೀಡಿದೆ.


