ನೀಟ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳಿಗೆ ವಿಶೇಷ ನ್ಯಾಯಾಲಯ; ಪಾಟ್ನಾ ಹೈಕೋರ್ಟ್ ಮಹತ್ವದ ಕ್ರಮ

1 Min Read
1 Min Read

ಪಾಟ್ನಾ: ನೀಟ್ (NEET) ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಪಾಟ್ನಾ ಹೈಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದ್ದು, ಪಾಟ್ನಾ, ಲಖಿಸರಾಯ್ ಮತ್ತು ಪೂರ್ಣಿಯಾ ಜಿಲ್ಲೆಗಳಲ್ಲಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಿದೆ.

ಈ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನೂ ನೇಮಕ ಮಾಡಲಾಗಿದೆ. ಪಾಟ್ನಾದಲ್ಲಿ ಗೌರವ್ ಸಿಂಗ್, ಲಖಿಸರಾಯ್‌ನಲ್ಲಿ ಸೀಮಾ ಭಾರತಿಯಾ ಹಾಗೂ ಪೂರ್ಣಿಯಾದಲ್ಲಿ ಠಾಕೂರ್ ಅಮನ್ ಕುಮಾರ್ ಅವರನ್ನು ಅಧ್ಯಕ್ಷ ನ್ಯಾಯಾಧೀಶರಾಗಿ (Presiding Officers) ನೇಮಕ ಮಾಡಲಾಗಿದೆ.

ಹೈಕೋರ್ಟ್ ಆಡಳಿತದ ಪ್ರಕಾರ, ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆ) ತಿದ್ದುಪಡಿ ಕಾಯ್ದೆ–2024ರಡಿ ದಾಖಲಾಗುವ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮ ಪ್ರಕರಣಗಳ ವಿಚಾರಣೆಯನ್ನು ಈ ವಿಶೇಷ ನ್ಯಾಯಾಲಯಗಳು ನಡೆಸಲಿವೆ.

ಆರೋಪಪಟ್ಟಿ (Charge Sheet) ಸಲ್ಲಿಕೆಯಾದ ಬಳಿಕ ಪ್ರತಿದಿನ ವಿಚಾರಣೆ (Day-to-Day Hearing) ನಡೆಸಿ, ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡುವ ಗುರಿಯನ್ನು ಹೈಕೋರ್ಟ್ ಹೊಂದಿದೆ.

ಈ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಲು ಅಗತ್ಯ ಪ್ರಸ್ತಾವನೆಯನ್ನು ಬಿಹಾರ ರಾಜ್ಯ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ಕಳುಹಿಸಿದೆ ಎಂದು ಹೈಕೋರ್ಟ್ ಆಡಳಿತ ತಿಳಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ, ಅಭ್ಯರ್ಥಿಗಳಿಗೆ ಶೀಘ್ರ ನ್ಯಾಯ ದೊರಕಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Share This Article