ನವದೆಹಲಿ: ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ತಕ್ಷಣದ ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕುಡಿಯುವ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಭಾರತದ ನಿಯಂತ್ರಕ ಮತ್ತು ಮಹಾಲೇಖಪರಿಶೋಧಕ (CAG) ವರದಿ ಹಿನ್ನೆಲೆಯಲ್ಲಿ ರೈಲ್ವೆ ಸಚಿವರು ದೇಶದಾದ್ಯಂತ ರೈಲ್ವೆ ಜಾಲದಲ್ಲಿ ಕುಡಿಯುವ ನೀರಿನ ಗುಣಮಟ್ಟದ ಕುರಿತು ದಿನವಿಡೀ ಸಮಗ್ರ ಪರಿಶೀಲನೆ ನಡೆಸಿದರು.
ಪರಿಶೀಲನೆಯ ಬಳಿಕ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸ್ವಚ್ಛ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದರ ಭಾಗವಾಗಿ ದೇಶದ ರೈಲ್ವೆ ಜಾಲದಾದ್ಯಂತ ಸುಮಾರು 20 ಸಾವಿರ ಸ್ಥಳಗಳಲ್ಲಿ ‘ಟ್ಯಾಂಕ್-ಟು-ಟ್ಯಾಪ್’ ನೀರು ಶುದ್ಧೀಕರಣ ಹಾಗೂ ಮೇಲ್ವಿಚಾರಣಾ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನೀರು ತಂಪುಗೊಳಿಸುವ ಘಟಕಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಮಗ್ರ ಶುದ್ಧೀಕರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಸ್ಥಾಪಿಸುವುದರ ಜೊತೆಗೆ ಅಗತ್ಯವಿರುವ ನೀರಿನ ಟ್ಯಾಂಕ್‌ಗಳನ್ನು ಬದಲಾಯಿಸಲಾಗುತ್ತದೆ.
ನೀರಿನ ಗುಣಮಟ್ಟವನ್ನು ಮೂಲ ಸ್ಥಳದಲ್ಲೂ ಹಾಗೂ ಪ್ರಯಾಣಿಕರಿಗೆ ನೀರು ಪೂರೈಕೆಯಾಗುವ ಔಟ್‌ಲೆಟ್‌ಗಳಲ್ಲೂ ನಿಯಮಿತವಾಗಿ ಪರೀಕ್ಷಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವೈಷ್ಣವ್ ಒತ್ತಿ ಹೇಳಿದರು.
ನೀರಿನ ಗುಣಮಟ್ಟದ ಮೇಲ್ವಿಚಾರಣೆಗೆ ಕೇಂದ್ರೀಕೃತ ವ್ಯವಸ್ಥೆ, ಸ್ಪಷ್ಟ ಜವಾಬ್ದಾರಿ ಹಾಗೂ ನೀರು ಸಂಗ್ರಹಿಸುವ ಟ್ಯಾಂಕ್‌ಗಳ ನಿಯಮಿತ ಸ್ವಚ್ಛತೆ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಯಾಣಿಕರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ರೈಲ್ವೆ ಸಚಿವಾಲಯದ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ರೈಲ್ವೆ ಮಂಡಳಿ ಮಟ್ಟದಲ್ಲೇ ನೇರವಾಗಿ ನಡೆಸಲಾಗುವುದು ಎಂದು ಹೇಳಿದೆ.
ನೀರಿನ ಗುಣಮಟ್ಟ ಮತ್ತು ಕೈಗೊಳ್ಳಲಾಗುತ್ತಿರುವ ಕ್ರಮಗಳ ಪ್ರಗತಿ ವರದಿಗಳನ್ನು ನಿಯಮಿತವಾಗಿ ಸಾರ್ವಜನಿಕಗೊಳಿಸುವ ಮೂಲಕ ಪಾರದರ್ಶಕತೆ ಖಚಿತಪಡಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
CAG ವರದಿಯಲ್ಲಿ ಉಲ್ಲೇಖಿಸಿರುವ ಎಲ್ಲಾ ಅಂಶಗಳನ್ನು ಪರಿಹರಿಸುವುದು ಹಾಗೂ ಪ್ರಯಾಣಿಕರ ಒಟ್ಟಾರೆ ಪ್ರಯಾಣ ಅನುಭವವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ವಿಸ್ತೃತ ಕ್ರಮಗಳ ಭಾಗವಾಗಿ ಈ ಉಪಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.


