ನವದೆಹಲಿ: ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಅನುಭವ ಪ್ರಶಸ್ತಿ 2026 ಅನ್ನು ಪ್ರದಾನ ಮಾಡಲಿದ್ದಾರೆ.
ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ಮಾಹಿತಿ ಪ್ರಕಾರ, ಕಾರ್ಯಕ್ರಮದಲ್ಲಿ ‘ಪಿಂಚಣಿ ಮಿತ್ರ’ ಕೈಪಿಡಿ ಹಾಗೂ ದೇಶವ್ಯಾಪಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC) ಅಭಿಯಾನ-5ಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಕಾರ್ಯಕ್ರಮದ ಅಂಗವಾಗಿ ಬ್ಯಾಂಕ್‌ಗಳ ಪ್ರದರ್ಶನವನ್ನೂ ಆಯೋಜಿಸಲಾಗಿದ್ದು, ನಿವೃತ್ತಿಯಾಗುತ್ತಿರುವ ನೌಕರರಿಗೆ ಸಂಬಂಧಿಸಿದ ಸೇವೆಗಳು ಮತ್ತು ಉತ್ಪನ್ನಗಳನ್ನು ಪರಿಚಯಿಸಲು 17 ಪಿಂಚಣಿ ವಿತರಿಸುವ ಬ್ಯಾಂಕ್‌ಗಳು ಭಾಗವಹಿಸಲಿವೆ. ನಿವೃತ್ತ ನೌಕರರಿಗೆ ಅನುಕೂಲವಾಗುವ ತಮ್ಮ ವಿವಿಧ ಉತ್ಪನ್ನಗಳು ಮತ್ತು ಸೇವೆಗಳನ್ನು ಬ್ಯಾಂಕ್‌ಗಳು ಈ ಪ್ರದರ್ಶನದಲ್ಲಿ ಪ್ರದರ್ಶಿಸಲಿವೆ.
ರಾಷ್ಟ್ರೀಯ ಅನುಭವ ಪ್ರಶಸ್ತಿ ಯೋಜನೆ 2026ರಡಿ ಒಟ್ಟು 15 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದೇಶ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಈ ಪ್ರಶಸ್ತಿ ಪುರಸ್ಕೃತರು ಸರ್ಕಾರದ ಹಲವು ಮಹತ್ವದ ಯೋಜನೆಗಳು ಮತ್ತು ಸುಧಾರಣಾ ಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಾಸ್‌ಪೋರ್ಟ್ ಸೇವಾ ಕೇಂದ್ರಗಳಂತಹ ಮಹತ್ವದ ಯೋಜನೆಗಳಲ್ಲಿ ಸೇವೆ ಸಲ್ಲಿಸುವುದು, ಹಳೆಯ ನಿಯಮಗಳನ್ನು ರದ್ದುಗೊಳಿಸಿ ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ಹೊಸ ನಿಯಮಗಳ ರೂಪಣೆ, ಆಡಳಿತ ಮತ್ತು ಲೆಕ್ಕಪತ್ರ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ ಹಾಗೂ ಇಂಧನ ಸಂರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರ ಕೊಡುಗೆ ಗುರುತಿಸಲಾಗಿದೆ.
‘ಅನುಭವ್’ ವೇದಿಕೆ ಕೇಂದ್ರ ಸರ್ಕಾರದ ನಿವೃತ್ತ ಹಾಗೂ ನಿವೃತ್ತಿಯಾಗುತ್ತಿರುವ ನೌಕರರಿಗೆ ತಮ್ಮ ಸರ್ಕಾರಿ ಸೇವೆಯ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಕೇಂದ್ರ ಸರ್ಕಾರದ ನೌಕರರ ಜೊತೆಗೆ 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ ನೌಕರರೂ ತಮ್ಮ ಅನುಭವಗಳನ್ನು ಈ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ.
ಸರ್ಕಾರಿ ಸೇವೆಯಲ್ಲಿನ ಅನುಭವ, ಉತ್ತಮ ಕಾರ್ಯಪದ್ಧತಿ ಹಾಗೂ ಮಹತ್ವದ ಕೊಡುಗೆಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶವನ್ನು ‘ಅನುಭವ್’ ವೇದಿಕೆ ಹೊಂದಿದೆ.


