ನವದೆಹಲಿ: ದೇಶಾದ್ಯಂತ ಇಂದು ರಾಷ್ಟ್ರೀಯ ಓದು ದಿನ (National Reading Day) ಆಚರಿಸಲಾಗುತ್ತಿದೆ. ಕೇರಳದ ಗ್ರಂಥಾಲಯ ಚಳವಳಿಯ ಹರಿಕಾರ ಹಾಗೂ ‘ಗ್ರಂಥಾಲಯ ಚಳವಳಿಯ ಪಿತಾಮಹ’ ಎಂದು ಗುರುತಿಸಲ್ಪಡುವ ಪುತುವಾಯಿಲ್ ನಾರಾಯಣ ಪಣಿಕ್ಕರ್ (ಪಿ.ಎನ್. ಪಣಿಕ್ಕರ್) ಅವರ ಜನ್ಮದಿನದ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಓದು ಅಭ್ಯಾಸವನ್ನು ಉತ್ತೇಜಿಸುವ ಹಾಗೂ ಸಮಾಜದಲ್ಲಿ ಜ್ಞಾನ ವಿಸ್ತರಣೆಗೆ ಪ್ರೇರಣೆ ನೀಡುವ ಉದ್ದೇಶದಿಂದ 1996ರ ಜೂನ್ 19ರಂದು ಕೇರಳ ಸರ್ಕಾರವು ಪಿ.ಎನ್. ಪಣಿಕ್ಕರ್ ಫೌಂಡೇಶನ್ ಸಹಯೋಗದಲ್ಲಿ ಮೊದಲ ಬಾರಿಗೆ ಓದು ದಿನವನ್ನು ಆಚರಿಸಿತ್ತು. ನಂತರ ಈ ಅಭಿಯಾನವು ಸಾಕ್ಷರತೆ ಮತ್ತು ಓದು ಸಂಸ್ಕೃತಿಯನ್ನು ಬೆಳೆಸುವ ಜನಾಂದೋಲನವಾಗಿ ರೂಪುಗೊಂಡಿತು.
ಕಾಲಕ್ರಮೇಣ ಈ ಕಾರ್ಯಕ್ರಮವು ಕೇರಳದ ಗಡಿಗಳನ್ನು ದಾಟಿ ದೇಶದಾದ್ಯಂತ ಮಹತ್ವ ಪಡೆದುಕೊಂಡಿತು. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಓದು ದಿನ ಹಾಗೂ ಓದು ತಿಂಗಳ ಆಚರಣೆಗೆ ಚಾಲನೆ ನೀಡಿ, ಈ ಅಭಿಯಾನಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಿದ್ದರು.
ಓದು ವ್ಯಕ್ತಿಯ ಜ್ಞಾನ, ಚಿಂತನೆ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಪ್ರಮುಖ ಅಸ್ತ್ರವಾಗಿದ್ದು, ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಅಭ್ಯಾಸ ಬೆಳೆಸುವ ಅಗತ್ಯವನ್ನು ಈ ದಿನ ಮತ್ತೊಮ್ಮೆ ನೆನಪಿಸುತ್ತದೆ. ಶಾಲೆಗಳು, ಕಾಲೇಜುಗಳು, ಗ್ರಂಥಾಲಯಗಳು ಹಾಗೂ ವಿವಿಧ ಸಂಘಟನೆಗಳು ಇಂದು ವಿಶೇಷ ಓದು ಕಾರ್ಯಕ್ರಮಗಳು, ಪುಸ್ತಕ ಪ್ರದರ್ಶನಗಳು ಮತ್ತು ಜಾಗೃತಿ ಅಭಿಯಾನಗಳನ್ನು ಆಯೋಜಿಸುತ್ತಿವೆ


