ಲಖನೌ: ಇಂದು ಅಂತರರಾಷ್ಟ್ರೀಯ ಹುಲಿ ದಿನ (International Tiger Day) ಆಚರಿಸಲಾಗುತ್ತಿದ್ದು, ಉತ್ತರ ಪ್ರದೇಶದ ರಣಿಪುರ್ ಹುಲಿ ಸಂರಕ್ಷಿತ ಪ್ರದೇಶ (Ranipur Tiger Reserve) ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದ್ದು, ರಾಜ್ಯವು ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಸಾಧನೆ ದಾಖಲಿಸಿದೆ. ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅನುರಾಧಾ ವೇಮುರಿ ಅವರ ಪ್ರಕಾರ, ಉತ್ತರ ಪ್ರದೇಶದಲ್ಲಿ ಈಗ ನಾಲ್ಕು ಹುಲಿ ಸಂರಕ್ಷಿತ ಪ್ರದೇಶಗಳು ಕಾರ್ಯನಿರ್ವಹಿಸುತ್ತಿದ್ದು, ಇದು ರಾಜ್ಯದ ಸಮೃದ್ಧ ಜೀವವೈವಿಧ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
2022ರ ಹುಲಿ ಗಣತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಒಟ್ಟು 205 ಹುಲಿಗಳಿವೆ. ರಾಜ್ಯದಲ್ಲಿ 2006ರಲ್ಲಿ 109 ಇದ್ದ ಹುಲಿಗಳ ಸಂಖ್ಯೆ, 2010ರಲ್ಲಿ 118, 2014ರಲ್ಲಿ 117, 2018ರಲ್ಲಿ 173 ಹಾಗೂ 2022ರಲ್ಲಿ 205ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಮಾನವ–ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ‘ಬಾಘ್ ಮಿತ್ರ’ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಯೋಜನೆಯನ್ನು 2019ರಲ್ಲಿ ಪಿಲಿಭಿತ್‌ನಲ್ಲಿ ಆರಂಭಿಸಲಾಗಿದ್ದು, ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ ಕಿ ಬಾತ್’ ಕಾರ್ಯಕ್ರಮದಲ್ಲೂ ಈ ಯೋಜನೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದರು.
2023ರ ಅಕ್ಟೋಬರ್‌ನಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಿಲಿಭಿತ್‌ನಲ್ಲಿ ‘ಬಾಘ್ ಮಿತ್ರ’ ಮೊಬೈಲ್ ಆ್ಯಪ್ ಅನ್ನು ಉದ್ಘಾಟಿಸಿದ್ದರು.
ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶದ ವಿಭಾಗೀಯ ಅರಣ್ಯಾಧಿಕಾರಿ ಮನೀಶ್ ಸಿಂಗ್ ಅವರ ಪ್ರಕಾರ, ಪಿಲಿಭಿತ್‌ನಲ್ಲಿ 120 ಸ್ಥಳೀಯ ನಿವಾಸಿಗಳನ್ನು ಒಳಗೊಂಡ ‘ಬಾಘ್ ಮಿತ್ರ’ಗಳ ವಾಟ್ಸ್‌ಆ್ಯಪ್ ಗುಂಪು ರಚಿಸಲಾಗಿದೆ. ಈ ಸದಸ್ಯರು ಅರಣ್ಯದ ಸುತ್ತಮುತ್ತಲಿನ ಗ್ರಾಮಗಳಿಂದ ಆಯ್ಕೆಯಾಗಿದ್ದಾರೆ.
ಅರಣ್ಯದಿಂದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಗ್ರಾಮಸ್ಥರನ್ನು ‘ಬಾಘ್ ಮಿತ್ರ’ರಾಗಿ ಆಯ್ಕೆ ಮಾಡಿ, ಅರಣ್ಯ ಇಲಾಖೆ ಅವರಿಗೆ ವಿಶೇಷ ತರಬೇತಿ ನೀಡುತ್ತದೆ. ಅರಣ್ಯದ ಹೊರಗೆ ಹುಲಿ ಅಥವಾ ಇತರೆ ಕಾಡು ಪ್ರಾಣಿಗಳು ಕಾಣಿಸಿಕೊಂಡರೆ, ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಾರೆ.
ಇದರಿಂದ ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ತಂಡಗಳನ್ನು ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವುದರೊಂದಿಗೆ, ಮಾನವ–ವನ್ಯಜೀವಿ ಸಂಘರ್ಷವನ್ನು ತಡೆಯಲು ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


