ಬಯೋಪಿಕ್‌ನಿಂದ ಫ್ಯಾಮಿಲಿ ಡ್ರಾಮಾವರೆಗೆ; ಸೂರ್ಯ ಜೊತೆಗಿನ ಪ್ರಯಾಣದ ಬಗ್ಗೆ ವೆಂಕಿ ಅಟ್ಲೂರಿ ಮಾತು

2 Min Read
2 Min Read

ಚೆನ್ನೈ: ನಿರ್ದೇಶಕ ವೆಂಕಿ ಅಟ್ಲೂರಿ ತಮ್ಮ ಮುಂದಿನ ಚಿತ್ರ ‘ವಿಶ್ವನಾಥ್ ಅಂಡ್ ಸನ್ಸ್’ ಕುರಿತು ಮಾತನಾಡುತ್ತಾ, ಆರಂಭದಲ್ಲಿ ನಟ ಸೂರ್ಯ ಅವರಿಗೆ ಈ ಕಥೆಯಲ್ಲ, ಬದಲಾಗಿ ಜೀವನಚರಿತ್ರೆ (ಬಯೋಪಿಕ್) ಆಧಾರಿತ ಚಿತ್ರದ ಕಥೆಯನ್ನು ಹೇಳಿದ್ದಾಗಿ ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ವೆಂಕಿ ಅಟ್ಲೂರಿ, “ಮೊದಲ ಬಾರಿ ಸೂರ್ಯ ಅವರನ್ನು ಭೇಟಿಯಾದಾಗ ನಾನು ಬಯೋಪಿಕ್ ಕಥೆಯನ್ನು ವಿವರಿಸಿದ್ದೆ. ಅವರಿಗೆ ಆ ಕಥೆ ತುಂಬಾ ಇಷ್ಟವಾಗಿತ್ತು ಮತ್ತು ಸಾಕಷ್ಟು ಉತ್ಸಾಹವೂ ವ್ಯಕ್ತಪಡಿಸಿದ್ದರು. ಆದರೆ ಆ ಯೋಜನೆಗೆ ಸಂಬಂಧಿಸಿದ ಹಕ್ಕುಗಳ (Rights) ಸಮಸ್ಯೆ ಎದುರಾದ ಕಾರಣ ಸಿನಿಮಾ ಮುಂದುವರಿಯಲಿಲ್ಲ” ಎಂದು ಹೇಳಿದರು.

ಇದರ ಬಳಿಕ ಸೂರ್ಯ ಅವರೇ ಹಲವು ವರ್ಷಗಳಿಂದ ಆಕ್ಷನ್ ಹಾಗೂ ಸಾಮಾಜಿಕ ಸಂದೇಶವಿರುವ ಸಿನಿಮಾಗಳಲ್ಲಿ ನಟಿಸಿರುವುದರಿಂದ, ಹಗುರವಾದ ಪ್ರೇಮಕಥೆ ಅಥವಾ ಕುಟುಂಬ ಕಥಾಹಂದರದ ಸಿನಿಮಾ ಮಾಡಲು ಆಸಕ್ತಿ ಇದೆ ಎಂದು ತಿಳಿಸಿದ್ದಾಗಿ ವೆಂಕಿ ಹೇಳಿದರು.

‘ಸಿಂಗಂ’ ಸರಣಿ, ‘ಸೂರರೈ ಪೊಟ್ರು’ ಮತ್ತು ‘ಜೈ ಭೀಮ್’ ಬಳಿಕ ಸುಮಾರು 12 ರಿಂದ 14 ವರ್ಷಗಳಿಂದ ನಾನು ಒಳ್ಳೆಯ ಕುಟುಂಬ ಮನರಂಜನಾ ಚಿತ್ರ ಮಾಡಿಲ್ಲ. ಇತ್ತೀಚೆಗೆ ಎರಡು ಬಯೋಪಿಕ್‌ಗಳಲ್ಲೂ ನಟಿಸಿದ್ದೇನೆ. ಈಗ ವಿಭಿನ್ನ ರೀತಿಯ ಕಥೆ ಮಾಡೋಣ ಎಂದು ಸೂರ್ಯ ಹೇಳಿದರು” ಎಂದು ವೆಂಕಿ ನೆನಪಿಸಿಕೊಂಡರು.

ಆ ನಂತರ ತಾವು 40 ವರ್ಷದ ವ್ಯಕ್ತಿ ಹಾಗೂ 20 ವರ್ಷದ ಯುವತಿಯ ಸುತ್ತ ಸಾಗುವ ಕಥೆಯ ಮೂಲ ಕಲ್ಪನೆಯನ್ನು ಸೂರ್ಯ ಅವರಿಗೆ ದೂರವಾಣಿ ಮೂಲಕ ವಿವರಿಸಿದ್ದಾಗಿ ಅವರು ಹೇಳಿದರು.

ಈ ಕಥೆ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ಅವರಿಗೂ ಇಷ್ಟವಾಗಿ, ಸಂಪೂರ್ಣ ಕಥೆ ಹೇಳಲು ವೆಂಕಿ ಅವರನ್ನು ಚೆನ್ನೈಗೆ ಆಹ್ವಾನಿಸಿದರು.

“ಸುಮಾರು 10 ಅಥವಾ 15ನೇ ದೃಶ್ಯದ ವೇಳೆಗೆ ನಿರ್ಮಾಪಕರು ಭಾವುಕರಾಗಿ ಕಣ್ಣೀರಿಟ್ಟರು. ಕಥೆ ಮುಗಿದ ಕೂಡಲೇ ಸೂರ್ಯ ಅವರಿಗೆ ಕರೆ ಮಾಡಿ, ‘ಇದು ಅದ್ಭುತ ಕಥೆ, ನೀವು ಈ ಸಿನಿಮಾ ಮಾಡಲೇಬೇಕು‘ ಎಂದು ಹೇಳಿದರು” ಎಂದು ವೆಂಕಿ ವಿವರಿಸಿದರು.

ನಂತರ ಸಂಪೂರ್ಣ ಕಥೆ ಕೇಳಿದ ಸೂರ್ಯ ಮೊದಲನೇ ಸಭೆಯಲ್ಲೇ ಕಥೆಗೆ ಒಪ್ಪಿಗೆ ನೀಡಿದರು. ಏಪ್ರಿಲ್‌ನಲ್ಲಿ ಕಥೆ ಹೇಳಿದ್ದರೆ, ಮೇ ಅಥವಾ ಜೂನ್ ವೇಳೆಗೆ ಚಿತ್ರೀಕರಣ ಆರಂಭವಾಯಿತು ಎಂದು ಅವರು ತಿಳಿಸಿದರು.

‘ವಿಶ್ವನಾಥ್ ಅಂಡ್ ಸನ್ಸ್’ ಚಿತ್ರದಲ್ಲಿ ಸೂರ್ಯ, ಮಮಿತಾ ಬೈಜು, ರವೀನಾ ಟಂಡನ್, ರಾಧಿಕಾ ಶರತ್‌ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

ಚಿತ್ರದಲ್ಲಿ 40 ವರ್ಷದ ಅಂತಾರಾಷ್ಟ್ರೀಯ ಪಿಸ್ತೂಲ್ ಶೂಟರ್ ಸಂಜಯ್ ವಿಶ್ವನಾಥ್ ಅವರ ಜೀವನದಲ್ಲಿ, 20 ವರ್ಷದ ಯುವತಿಯೊಬ್ಬಳು ಪ್ರವೇಶಿಸಿದ ಬಳಿಕ ನಡೆಯುವ ಘಟನೆಗಳನ್ನು ಕುಟುಂಬ ಕಥಾಹಂದರದ ಮೂಲಕ ತೆರೆಗೆ ತರಲಾಗಿದೆ.

ವೆಂಕಿ ಅಟ್ಲೂರಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದು, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.

Share This Article