‘ಜಾಲಿ’ಯಲ್ಲಿ ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ಗೌರವ: ಜುಲೈ 31ರಂದು ಸಿನಿಮಾ ಬಿಡುಗಡೆ

1 Min Read
1 Min Read

ಬೆಂಗಳೂರು: ನಟ-ನಿರ್ದೇಶಕ ತರುಷ್ ನಿರ್ದೇಶಿಸಿ, ಅವರೇ ನಾಯಕನಾಗಿ ಅಭಿನಯಿಸಿರುವ ‘ಜಾಲಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ ವೇಳೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಉಮಾಪತಿ ಶ್ರೀನಿವಾಸ್ ಗೌಡ, ಮೊಬೈಲ್ ಫೋನ್‌, ಒಟಿಟಿ (OTT) ವೇದಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಕನ್ನಡ ಚಿತ್ರರಂಗ ಸವಾಲಿನ ಹಂತವನ್ನು ಎದುರಿಸುತ್ತಿದೆ ಎಂದು ಹೇಳಿದರು.

“ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರಬೇಕಾದರೆ ಉತ್ತಮ ಕಥೆ ಹಾಗೂ ನಿಯಂತ್ರಿತ ಬಜೆಟ್‌ನೊಂದಿಗೆ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಬೇಕು. ಸಿನಿಮಾ ನಿರ್ಮಾಣದಲ್ಲಿ ಅತಿದೊಡ್ಡ ಆರ್ಥಿಕ ಹೊರೆ ಹೊರುವ ನಿರ್ಮಾಪಕರಿಗೆ ಹೆಚ್ಚಿನ ಗೌರವ ಮತ್ತು ಬೆಂಬಲ ಸಿಗಬೇಕು” ಎಂದು ಅವರು ಅಭಿಪ್ರಾಯಪಟ್ಟರು.

ಕುಟುಂಬ ಮನರಂಜನೆಯೊಂದಿಗೆ ಸಾಮಾಜಿಕ ಸಂದೇಶ

ಕುಟುಂಬ ಮನರಂಜನಾ ಚಿತ್ರವಾಗಿ ಮೂಡಿಬಂದಿರುವ ‘ಜಾಲಿ’ ಸಿನಿಮಾ ಜುಲೈ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ಟ್ರೇಲರ್‌ನಲ್ಲಿ ಹಾಸ್ಯ, ಆ್ಯಕ್ಷನ್ ಹಾಗೂ ಭಾವನಾತ್ಮಕ ಅಂಶಗಳ ಜೊತೆಗೆ ಇಂದಿನ ದಾಂಪತ್ಯ ಜೀವನದ ಸಂಬಂಧಗಳು, ಭಿನ್ನಾಭಿಪ್ರಾಯಗಳು ಮತ್ತು ಕುಟುಂಬದ ಮೌಲ್ಯಗಳನ್ನು ತೆರೆದಿಡುವ ಕಥಾಹಂದರದ ಝಲಕ್ ನೀಡಲಾಗಿದೆ.

ಅಪ್ಪುಗೆ ವಿಶೇಷ ನಮನ

ಚಿತ್ರದ ಕುರಿತು ಮಾತನಾಡಿದ ನಟ-ನಿರ್ದೇಶಕ ತರುಷ್, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನಗಳು ಹಾಗೂ ದಂಪತಿಗಳ ನಡುವಿನ ತಪ್ಪು ತಿಳುವಳಿಕೆಗಳ ಕಾರಣಗಳನ್ನು ಚಿತ್ರದಲ್ಲಿ ತೆರೆದಿಡಲಾಗಿದೆ ಎಂದು ಹೇಳಿದರು.

ಜೊತೆಗೆ, ತಂದೆ–ಮಗಳ ಭಾವನಾತ್ಮಕ ಬಾಂಧವ್ಯವೇ ಚಿತ್ರದ ಪ್ರಮುಖ ಅಂಶವಾಗಿದ್ದು, ದಿವಂಗತ ನಟ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಚಿತ್ರದಲ್ಲಿ ವಿಶೇಷ ನಮನ (Tribute) ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

Share This Article