ನವದೆಹಲಿ: ಭಾರತದ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿರುವ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲುಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. ಈ ರೈಲು ಜಿಂದ್–ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದೆ.
ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಹಾಗೂ ಸಂಯೋಜಿಸಲಾದ ಈ ರೈಲು ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದ್ದು, ಸುಧಾರಿತ ರೈಲ್ವೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ.
ಈ ರೈಲಿನ ಗರಿಷ್ಠ ವಿನ್ಯಾಸ ವೇಗ ಗಂಟೆಗೆ 110 ಕಿಲೋಮೀಟರ್ ಆಗಿದ್ದರೂ, ಜಿಂದ್–ಸೋನಿಪತ್ ಮಾರ್ಗದಲ್ಲಿ ಗರಿಷ್ಠ 75 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.
ಭಾರತದ ಹೈಡ್ರೋಜನ್ ರೈಲು 10 ಬೋಗಿಗಳ ವಿನ್ಯಾಸ ಹೊಂದಿದ್ದು, ವಿಶ್ವದ ಅತಿ ಉದ್ದದ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲುಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 3,200 ಹಾರ್ಸ್ ಪವರ್ ಸಾಮರ್ಥ್ಯದ ಪ್ರೊಪಲ್ಷನ್ ವ್ಯವಸ್ಥೆ ಹೊಂದಿರುವ ಈ ರೈಲು, ಕಾರ್ಯಾಚರಣೆಯಲ್ಲಿರುವ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿದೆ.
ಈ ರೈಲು ಹೈಡ್ರೋಜನ್ ಫ್ಯೂಯೆಲ್ ಸೆಲ್ (Hydrogen Fuel Cell) ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಹೈಡ್ರೋಜನ್ ಅನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ ರೈಲಿಗೆ ಚಲನೆ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀರಿನ ಆವಿಯಷ್ಟೇ ಉಪ ಉತ್ಪನ್ನವಾಗಿ ಹೊರಬರುವುದರಿಂದ ಕಾರ್ಯಾಚರಣೆ ವೇಳೆ ಕಾರ್ಬನ್ ಹೊರಸೂಸುವಿಕೆ ಶೂನ್ಯ (Zero Carbon Emission) ಆಗಿರುತ್ತದೆ.
ಸಾಮಾನ್ಯ ವಿದ್ಯುತ್ ರೈಲುಗಳಂತೆ ನಿರಂತರ ಮೇಲ್ದಾರಿ ವಿದ್ಯುತ್ ತಂತಿಗಳ ಅಗತ್ಯವಿಲ್ಲ. ರೈಲಿನಲ್ಲೇ ವಿದ್ಯುತ್ ಉತ್ಪಾದನೆಯಾಗುವುದರಿಂದ ಇದು ಪರಿಸರ ಸ್ನೇಹಿ ಹಾಗೂ ಇಂಧನ ದಕ್ಷ ಸಾರಿಗೆ ವ್ಯವಸ್ಥೆಯಾಗಿ ಗುರುತಿಸಿಕೊಂಡಿದೆ.
ಹಸಿರು ಹೈಡ್ರೋಜನ್ (Green Hydrogen) ಬಳಕೆಯಿಂದ ಪಳೆಯುಳಿಕೆ ಇಂಧನ ಆಧಾರಿತ ಉಷ್ಣ ವಿದ್ಯುತ್ ಉತ್ಪಾದನೆಯ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಸುಸ್ಥಿರ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ಇದು ನೆರವಾಗಲಿದೆ.
ರೈಲಿನಲ್ಲಿ ಹೈಡ್ರೋಜನ್ ಸೋರಿಕೆ, ಅಧಿಕ ಉಷ್ಣತೆ, ಬೆಂಕಿ ಹಾಗೂ ಹೊಗೆ ಪತ್ತೆಹಚ್ಚುವ ಬಹುಹಂತದ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ.
ಈ ರೈಲು ಸೇವೆಯ ಆರಂಭದೊಂದಿಗೆ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕ ಬಳಿಕ ಹೈಡ್ರೋಜನ್ ಚಾಲಿತ ರೈಲುಗಳನ್ನು ಯಶಸ್ವಿಯಾಗಿ ಕಾರ್ಯಾಚರಣೆಗೊಳಿಸಿರುವ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಲಿದೆ.


