ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್ (UDAN) ಯೋಜನೆಯ ಮುಂದಿನ ಹಂತದಲ್ಲಿ 120 ಹೊಸ ತಾಣಗಳಿಗೆ ವಿಮಾನ ಸಂಪರ್ಕ ಕಲ್ಪಿಸುವುದರ ಜೊತೆಗೆ, ಮುಂದಿನ 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ನವದೆಹಲಿದಲ್ಲಿ ನಡೆದ ಉಡಾನ್ ಯೋಜನೆಯ ಮುಂದಿನ ಹಂತದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಷ್ಕೃತ ಯೋಜನೆಯಡಿ ವ್ಯಾಬಿಲಿಟಿ ಗ್ಯಾಪ್ ಫಂಡಿಂಗ್ (Viability Gap Funding) ಪಡೆಯುವ ಅರ್ಹತೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ನೆರವಿನ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸಲಾಗಿದ್ದು, ಆಯ್ದ ಟಿಯರ್-2 ಮತ್ತು ಟಿಯರ್-3 ನಗರಗಳ ವಿಮಾನ ನಿಲ್ದಾಣಗಳಿಗೆ ಕಾರ್ಯಾಚರಣೆ ಹಾಗೂ ನಿರ್ವಹಣಾ (O&M) ನೆರವು ಒದಗಿಸುವ ಹೊಸ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ ಎಂದು ತಿಳಿಸಿದರು.
ಉಡಾನ್ ಯೋಜನೆಯ ಮುಂದಿನ ಹಂತಕ್ಕಾಗಿ ₹29 ಸಾವಿರ ಕೋಟಿ ಮೀಸಲಿಡಲಾಗಿದ್ದು, ಮುಂದಿನ ಹತ್ತು ವರ್ಷಗಳಲ್ಲಿ 100 ಹೊಸ ವಿಮಾನ ನಿಲ್ದಾಣಗಳು ಹಾಗೂ 200 ಹೆಲಿಪೋರ್ಟ್ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.
ಈ ಯೋಜನೆಯು ಆತ್ಮನಿರ್ಭರ್ ಭಾರತ ಅಭಿಯಾನಕ್ಕೂ ಮತ್ತಷ್ಟು ಬಲ ನೀಡಲಿದ್ದು, ದೇಶೀಯ ವಿಮಾನ ತಯಾರಿಕೆಗೆ ಉತ್ತೇಜನ, ನಿರ್ವಹಣೆ-ದುರಸ್ತಿ-ಪುನರ್ಪರಿಶೀಲನೆ (MRO) ಕ್ಷೇತ್ರದ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ರಾಮ್ ಮೋಹನ್ ನಾಯ್ಡು ತಿಳಿಸಿದರು.


