ನವದೆಹಲಿ: ದೇಶದ ಆಹಾರ ಧಾನ್ಯ ಸಂಗ್ರಹ ವ್ಯವಸ್ಥೆಯನ್ನು (Foodgrain Storage Ecosystem) ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ನವದೆಹಲಿಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, ಸಭೆಯಲ್ಲಿ ಪ್ರಸ್ತಾವಿತ ಆಹಾರ ಧಾನ್ಯ ಸಂಗ್ರಹ ನೀತಿ (Storage Policy) ಹಾಗೂ ಖಾಸಗಿ ಉದ್ಯಮಿಗಳ ಖಾತರಿ ಯೋಜನೆ (Private Entrepreneurs Guarantee – PEG Scheme) ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಆಹಾರ ಧಾನ್ಯ ನಿರ್ವಹಣೆಯಲ್ಲಿನ ಹೊಸ ಸವಾಲುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ವಿಶೇಷವಾಗಿ, ಪ್ರಾದೇಶಿಕ ಮಟ್ಟದಲ್ಲಿ ಸಂಗ್ರಹ ಸಾಮರ್ಥ್ಯದ ಅಸಮತೋಲನ, ಹೆಚ್ಚುವರಿ ಆಹಾರ ಧಾನ್ಯ ದಾಸ್ತಾನು ನಿರ್ವಹಣೆ, ಗೋದಾಮುಗಳ ಸಾಮರ್ಥ್ಯದ ಸಮರ್ಪಕ ಬಳಕೆ ಹಾಗೂ ಪ್ರಸ್ತುತ ಖರೀದಿ (Procurement) ಪ್ರವೃತ್ತಿಗೆ ಅನುಗುಣವಾಗಿ ಸಂಗ್ರಹ ಮಾನದಂಡಗಳನ್ನು ಪರಿಷ್ಕರಿಸುವ ಅಗತ್ಯ ಕುರಿತು ಅಧಿಕಾರಿಗಳು ಚರ್ಚಿಸಿದರು.
ಈ ಸುಧಾರಣೆಗಳ ಮೂಲಕ ದೇಶದಲ್ಲಿ ಹೆಚ್ಚು ಪರಿಣಾಮಕಾರಿ, ವೈಜ್ಞಾನಿಕ ಹಾಗೂ ಭವಿಷ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವ ಆಹಾರ ಧಾನ್ಯ ಸಂಗ್ರಹ ವ್ಯವಸ್ಥೆ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಇಂತಹ ಕ್ರಮಗಳು ಭಾರತದ ಆಹಾರ ಭದ್ರತೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಅವರು ಹೇಳಿದ್ದಾರೆ.


