ಭಾರತ-ಇಂಡೋನೇಷ್ಯಾ ಸಂಬಂಧಕ್ಕೆ ಹೊಸ ಚೈತನ್ಯ; ಅಧ್ಯಕ್ಷ ಪ್ರಬೋವೊ ಜೊತೆ ಪ್ರಧಾನಿ ಮೋದಿ ಮಹತ್ವದ ಚರ್ಚೆ

1 Min Read
1 Min Read

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿರುವ ರಾಷ್ಟ್ರಪತಿ ಭವನದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ (Comprehensive Strategic Partnership) ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು.

ಇದಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಔಪಚಾರಿಕ ಸ್ವಾಗತ ನೀಡಲಾಯಿತು. ಬಳಿಕ ಅಧ್ಯಕ್ಷ ಪ್ರಬೋವೊ ಹಾಗೂ ಪ್ರಧಾನಿ ಮೋದಿ ತಮ್ಮ ತಮ್ಮ ದೇಶಗಳ ನಿಯೋಗದ ಸದಸ್ಯರನ್ನು ಪರಸ್ಪರ ಪರಿಚಯಿಸಿಕೊಂಡರು. ಈ ವೇಳೆ ಉಭಯ ರಾಷ್ಟ್ರಗಳ ಸ್ನೇಹ ಮತ್ತು ಸಹಕಾರದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ ಎಂಬ ಸಂದೇಶ ರವಾನೆಯಾಯಿತು.

ಪ್ರಧಾನಮಂತ್ರಿ ಮೋದಿ ಅವರು ರಾಷ್ಟ್ರಪತಿ ಭವನದ ಇಸ್ತಾನಾ ಮರ್ಡೇಕಾದಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು.

ಇಂದು ಪ್ರಧಾನಿ ಮೋದಿ ಇಂಡೋನೇಷ್ಯಾ ಸಂಸತ್ ಸಂಕೀರ್ಣವಾದ ಕೊಂಪ್ಲೆಕ್ಸ್ ಪಾರ್ಲೆಮೆನ್ ರಿಪಬ್ಲಿಕ್ ಇಂಡೋನೇಷ್ಯಾಗೆ ಭೇಟಿ ನೀಡಿ, ಸಂಸದೀಯ ಸಹಕಾರದ ಮಹತ್ವವನ್ನು ಒತ್ತಿಹೇಳಲಿದ್ದಾರೆ. ಬಳಿಕ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ನಡೆಯುವ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ.

ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಪ್ರಧಾನಿ ಮೋದಿ ನಿನ್ನೆ ಇಂಡೋನೇಷ್ಯಾಗೆ ಆಗಮಿಸಿದ್ದರು. ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಅವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಭಾರತೀಯ ಪ್ರಧಾನಿಯ ವಿಮಾನ ಇಂಡೋನೇಷ್ಯಾ ವಾಯುಪ್ರದೇಶ ಪ್ರವೇಶಿಸಿದ ಬಳಿಕ ಅಲ್ಲಿನ ವಾಯುಪಡೆಯ ಯುದ್ಧವಿಮಾನಗಳು ಎಸ್ಕಾರ್ಟ್ ನೀಡಿದ್ದವು.

ಈ ಆತ್ಮೀಯ ಸ್ವಾಗತದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, 2018ರಲ್ಲಿ ಸ್ಥಾಪನೆಯಾದ ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಡೋನೇಷ್ಯಾ ಭೇಟಿ ಬಳಿಕ ಪ್ರಧಾನಿ ಮೋದಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ.

Share This Article