ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರಿಕೆ; ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

1 Min Read
1 Min Read

ಮಹಾರಾಷ್ಟ್ರದ ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಇಂದು ಪಾಲ್ಘರ್, ರಾಯಗಢ ಹಾಗೂ ನಾಸಿಕ್ ಮತ್ತು ಪುಣೆ ಘಟ್ಟ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.

ಮುಂಬೈ, ಇತರೆ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಮಹಾರಾಷ್ಟ್ರದ ಕೆಲವು ಭಾಗಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳನ್ನು ನಿಯೋಜಿಸಿ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಘಟ್ಟ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಲೋಣಾವಾಲಾದಲ್ಲಿ 600 ಮಿ.ಮೀ.ಗಿಂತ ಅಧಿಕ ಮಳೆಯಾಗಿದೆ. ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ. ಜೊತೆಗೆ ಹಲವು ಪ್ರವಾಸಿ ತಾಣಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚಲಾಗಿದೆ.

ನಾಸಿಕ್ ಜಿಲ್ಲೆಯಲ್ಲಿ ಮೋಡ ಸ್ಫೋಟದಂತಹ (Cloudburst) ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಗರಿಷ್ಠ ಎಚ್ಚರಿಕೆ ಘೋಷಿಸಲಾಗಿದೆ.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮುಂಬೈ, ಥಾಣೆ, ನವಿ ಮುಂಬೈ, ಪಾಲ್ಘರ್, ರಾಯಗಢ, ರತ್ನಗಿರಿ, ಹಾಗೂ ನಾಸಿಕ್, ಸಾತಾರಾ ಮತ್ತು ಪುಣೆಯ ಸೂಕ್ಷ್ಮ ಘಟ್ಟ ಪ್ರದೇಶಗಳ ಶಾಲೆ ಮತ್ತು ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ನಿನ್ನೆ ಮುಂಬೈ ಸೇರಿದಂತೆ ಹಲವು ಕರಾವಳಿ ಜಿಲ್ಲೆಗಳಲ್ಲಿ 100ರಿಂದ 200 ಮಿ.ಮೀ.ವರೆಗೆ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಭೂಕುಸಿತದಿಂದ ಬಂದ್ ಆಗಿದ್ದ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾಗಶಃ ಸಂಚಾರ ಪುನರಾರಂಭವಾಗಿದೆ.

ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಹೊರಬರಬೇಕೆಂದು ಆಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.

Share This Article