ನವದೆಹಲಿ: ಭಾರತದ ಚರ್ಮ ಮತ್ತು ಪಾದರಕ್ಷೆ ಉದ್ಯಮಕ್ಕೆ ಮುಕ್ತ ವ್ಯಾಪಾರ ಒಪ್ಪಂದಗಳ (FTA) ಮೂಲಕ ಹೊಸ ರಫ್ತು ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕೌನ್ಸಿಲ್ ಫಾರ್ ಲೆದರ್ ಎಕ್ಸ್ಪೋರ್ಟ್ಸ್ ರಾಷ್ಟ್ರೀಯ ರಫ್ತು ಶ್ರೇಷ್ಠತಾ ಪ್ರಶಸ್ತಿ–2024-25 ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಭಾರತದ ಚರ್ಮ ಮತ್ತು ಪಾದರಕ್ಷೆ ಉದ್ಯಮವು ಸುಮಾರು 4.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಫ್ತು ಮಾಡುತ್ತಿದ್ದು, ಇನ್ನಷ್ಟು ಬೆಳವಣಿಗೆಗೆ ಅಪಾರ ಅವಕಾಶಗಳಿವೆ ಎಂದು ತಿಳಿಸಿದರು.
ಭಾರತವು ಬ್ರಿಟನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಒಮಾನ್ ಸೇರಿದಂತೆ 38 ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುತ್ತಿದೆ. ಈಕ್ವಡಾರ್ ಸೇರಿದಂತೆ ಹಲವು ರಾಷ್ಟ್ರಗಳು ಕೂಡ ಭಾರತದೊಂದಿಗೆ ಎಫ್ಟಿಎಗೆ ಆಸಕ್ತಿ ತೋರಿರುವುದರಿಂದ ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳು ಲಭಿಸಲಿವೆ ಎಂದು ಅವರು ಹೇಳಿದರು.
ಭಾರತದ ಚರ್ಮ ಉತ್ಪನ್ನಗಳ ರಫ್ತಿನಲ್ಲಿ ಶೇ.77ರಷ್ಟು ಪಾಲು ಕೇವಲ 15 ದೇಶಗಳಿಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದ ಸಚಿವರು, ಹೊಸ ಮಾರುಕಟ್ಟೆಗಳತ್ತ ಗಮನ ಹರಿಸುವ ಮೂಲಕ ರಫ್ತು ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಉದ್ಯಮಿಗಳಿಗೆ ಸಲಹೆ ನೀಡಿದರು.
ಪಾದರಕ್ಷೆಗಳಷ್ಟೇ ಅಲ್ಲದೆ ಬ್ಯಾಗ್ಗಳು, ವಾಲೆಟ್ಗಳು, ಕುದುರೆ ಸ್ಯಾಡಲ್ಗಳು, ಜಾಕೆಟ್ಗಳು, ಉಡುಪುಗಳು ಹಾಗೂ ಇತರ ಚರ್ಮ ಉತ್ಪನ್ನಗಳಿಗೂ ಜಾಗತಿಕ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ ಎಂದು ಗೋಯಲ್ ಹೇಳಿದರು.
ಚರ್ಮ ಉದ್ಯಮವು ಅತ್ಯಂತ ವೈವಿಧ್ಯಮಯ ಬಳಕೆಯ ಕ್ಷೇತ್ರವಾಗಿದ್ದು, ಪೀಠೋಪಕರಣಗಳು, ಒಳಾಂಗಣ ಅಲಂಕಾರ, ಉನ್ನತ ದರ್ಜೆಯ ವಾಲ್ ಕವರ್ಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಚರ್ಮ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ವಿವಿಧ ಬೆಲೆಮಟ್ಟದ ಉತ್ಪನ್ನಗಳನ್ನು ಒದಗಿಸುವ ಸಾಮರ್ಥ್ಯ ಈ ಉದ್ಯಮಕ್ಕಿದೆ ಎಂದು ಅವರು ಅಭಿಪ್ರಾಯಪಟ್ಟರು.


