26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್; ಆರೋಗ್ಯದ ಕಡೆ ಗಮನ ಹರಿಸಲು ಪ್ರಧಾನಿ ಮೋದಿ ಸಲಹೆ

1 Min Read
1 Min Read

ನವದೆಹಲಿ: ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರು 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಅಂತ್ಯಗೊಳಿಸಿದರು.

ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ವಾಂಗ್‌ಚುಕ್ ಉಪವಾಸ ಮುಕ್ತಾಯಗೊಳಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಹಾಗೂ ಲೇಹ್–ಲಡಾಖ್‌ನ ಏಪೆಕ್ಸ್ ಬಾಡಿ ಸಂಘಟನೆಯ ಹಿರಿಯ ಮುಖಂಡರೂ ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಸೋನಂ ವಾಂಗ್‌ಚುಕ್ ಅವರಿಗೆ ವೈದ್ಯರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ದೈನಂದಿನ ಜೀವನವನ್ನು ಪುನರಾರಂಭಿಸಿ, ಶೀಘ್ರದಲ್ಲೇ ಹಿಂದಿನ ಆರೋಗ್ಯ ಮತ್ತು ತೂಕವನ್ನು ಮರಳಿ ಪಡೆಯುವಂತೆ ಹಾರೈಸಿದರು. ಜೊತೆಗೆ, ಅವರ ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ವಿವಿಧ ರಾಜಕೀಯ ಪಕ್ಷಗಳ 65ಕ್ಕೂ ಹೆಚ್ಚು ಸಂಸದರು ಆಸ್ಪತ್ರೆಗೆ ಭೇಟಿ ನೀಡಿ ಅಥವಾ ಪತ್ರಗಳ ಮೂಲಕ ಉಪವಾಸವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದ್ದರು.

ಉಪವಾಸ ಅಂತ್ಯಗೊಳಿಸುವ ನಿರ್ಧಾರವು ವಿವಿಧ ಬೇಡಿಕೆಗಳ ಕುರಿತು ನಡೆದ ಸುದೀರ್ಘ ಮಾತುಕತೆಗಳ ಬಳಿಕ ಕೈಗೊಳ್ಳಲಾಗಿದೆ ಎಂದು ವಾಂಗ್‌ಚುಕ್ ತಿಳಿಸಿದರು. ದೇಶದಾದ್ಯಂತ ಯಾವುದೇ ರೀತಿಯ ಹಿಂಸಾಚಾರ ನಡೆಯದಂತೆ ಎಲ್ಲರೂ ಎಚ್ಚರಿಕೆ ವಹಿಸಿ, ಶಾಂತಿ ಕಾಪಾಡುವಂತೆ ಅವರು ಮನವಿ ಮಾಡಿದರು.

ಕಳೆದ ತಿಂಗಳ 28ರಂದು ಸೋನಂ ವಾಂಗ್‌ಚುಕ್ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಹೊಣೆಗಾರಿಕೆ ನಿಗದಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

Share This Article