ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ವತಿಯಿಂದ ಆಂತರಿಕ ಒಂಬುಡ್ಸ್‌ಮನ್‌ಗಳ (Internal Ombudsmen) ಮೂರನೇ ವಾರ್ಷಿಕ ಸಮ್ಮೇಳನ ಇಂದು ಮುಂಬೈನಲ್ಲಿ ನಡೆಯಿತು.
ಈ ಸಮ್ಮೇಳನದಲ್ಲಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs), ಕ್ರೆಡಿಟ್ ಮಾಹಿತಿ ಸಂಸ್ಥೆಗಳು ಹಾಗೂ ಆರ್‌ಬಿಐ ಒಂಬುಡ್ಸ್‌ಮನ್ ಪ್ರತಿನಿಧಿಗಳು ಭಾಗವಹಿಸಿ, ಗ್ರಾಹಕರ ದೂರುಗಳ ಪರಿಣಾಮಕಾರಿ ಪರಿಹಾರ ವ್ಯವಸ್ಥೆ ಕುರಿತು ಚರ್ಚಿಸಿದರು.
ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಆರ್‌ಬಿಐ ಉಪ ಗವರ್ನರ್ ಸ್ವಾಮಿನಾಥನ್ ಜೆ., ಬ್ಯಾಂಕುಗಳ ನಿರ್ದೇಶಕ ಮಂಡಳಿ ಹಾಗೂ ಹಿರಿಯ ಆಡಳಿತ ಮಂಡಳಿಯವರು ಆಂತರಿಕ ಒಂಬುಡ್ಸ್‌ಮನ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.
ಗ್ರಾಹಕರಿಗೆ ಅರ್ಥಪೂರ್ಣ, ನ್ಯಾಯಸಮ್ಮತ ಹಾಗೂ ಪರಿಣಾಮಕಾರಿ ರೀತಿಯಲ್ಲಿ ದೂರುಗಳ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಪುನರಾವರ್ತನೆಯಾಗುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಮೂಲ ಕಾರಣಗಳ ವಿಶ್ಲೇಷಣೆ (Root Cause Analysis) ನಡೆಸಿ, ಸೂಕ್ತ ಪರಿಹಾರ ಕ್ರಮಗಳನ್ನು ಜಾರಿಗೆ ತರಲು ಒತ್ತು ನೀಡಿದರು.
ಸಮ್ಮೇಳನದಲ್ಲಿ ಇತ್ತೀಚಿನ ದೂರು ಪರಿಹಾರ ವ್ಯವಸ್ಥೆಯ ಬೆಳವಣಿಗೆಗಳು, ನಿಯಂತ್ರಣಾತ್ಮಕ ನಿರೀಕ್ಷೆಗಳು ಹಾಗೂ ಆರ್‌ಬಿಐ ಒಂಬುಡ್ಸ್‌ಮನ್‌ಗಳ ಅನುಭವಗಳು ಕುರಿತು ವ್ಯಾಪಕ ಚರ್ಚೆ ನಡೆಯಿತು. ದೂರುಗಳನ್ನು ವೇಗವಾಗಿ ಹಾಗೂ ಗುಣಮಟ್ಟದೊಂದಿಗೆ ಇತ್ಯರ್ಥಗೊಳಿಸುವುದು ಮತ್ತು ಅನಗತ್ಯವಾಗಿ ಸಮಸ್ಯೆಗಳು ಉಲ್ಬಣಗೊಳ್ಳುವುದನ್ನು ತಡೆಯುವ ವ್ಯವಸ್ಥಾತ್ಮಕ ಸುಧಾರಣೆಗಳ ಅಗತ್ಯವನ್ನೂ ಸಭೆಯಲ್ಲಿ ಒತ್ತಿ ಹೇಳಲಾಯಿತು.


