ನವದೆಹಲಿ: ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆ, ತಂತ್ರಜ್ಞಾನ ಮತ್ತು ನವೋದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA), ನವದೆಹಲಿಯ ತನ್ನ ನವೋದ್ಯಮ ಕೇಂದ್ರವಾದ AIIA-iCAINEನ ಆರನೇ ಸಂಸ್ಥಾಪನಾ ದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ಉತ್ತೇಜಿಸುವ ರಾಷ್ಟ್ರೀಯ ಮಟ್ಟದ ನಾವೀನ್ಯತಾ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಕೇಂದ್ರ ಆಯುಷ್ ಸಚಿವಾಲಯದ ಮಾಹಿತಿಯ ಪ್ರಕಾರ, ‘ಆಯುಷ್ಟೆಕ್ ಇನ್ನೋವೇಟ್: ನ್ಯಾಷನಲ್ ಓಪನ್ ಆಯುರ್ವೇದ ಎಐ ಚಾಲೆಂಜ್’ ಎಂಬ ಹೆಸರಿನ ಈ ಸ್ಪರ್ಧೆಯ ಅಂತಿಮ ಸುತ್ತು ಡಿಸೆಂಬರ್ 15ರಿಂದ 18ರವರೆಗೆ ಮುಂಬೈನ ಐಐಟಿ ಬಾಂಬೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿ, ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ವಾಣಿಜ್ಯೀಕರಣಕ್ಕೆ ಬಲ ನೀಡುವ ಉದ್ದೇಶದಿಂದ AIIA-iCAINE ಎರಡು ಮಹತ್ವದ ತಿಳಿವಳಿಕೆ ಒಪ್ಪಂದಗಳಿಗೆ (MoU) ಸಹಿ ಹಾಕಿದೆ.
ವಿಶ್ವ ಆಯುರ್ವೇದ ಪ್ರತಿಷ್ಠಾನದ (WAF) ಜೊತೆಗಿನ ಒಪ್ಪಂದದಡಿ ‘AI in Ay – Secretariat for Artificial Intelligence in Ayurveda’ ಎಂಬ ಸಹಯೋಗ ವೇದಿಕೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಆಯುರ್ವೇದ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು ಈ ವೇದಿಕೆಯ ಪ್ರಮುಖ ಗುರಿಯಾಗಿದೆ.
ಈ ಸಹಯೋಗದ ಮೂಲಕ ಜಂಟಿ ಸಂಶೋಧನಾ ಯೋಜನೆಗಳು, ಅನುದಾನ ಮತ್ತು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ಪ್ರಸ್ತಾವನೆಗಳು, ಸಾಮರ್ಥ್ಯವರ್ಧನಾ ಕಾರ್ಯಕ್ರಮಗಳು, ಹ್ಯಾಕಥಾನ್ಗಳು ಹಾಗೂ ನವೋದ್ಯಮಗಳ ಇನ್ಕ್ಯುಬೇಷನ್ಗೆ ಅವಕಾಶ ಕಲ್ಪಿಸಲಾಗುತ್ತದೆ.
ಇದೇ ಸಹಯೋಗದ ಮತ್ತೊಂದು ಪ್ರಮುಖ ಫಲವಾಗಿ ಆಯುರ್ವೇದ ಕ್ಷೇತ್ರಕ್ಕಾಗಿ ಬೌದ್ಧಿಕ ಸ್ವತ್ತಿನ ಹಕ್ಕುಗಳ (IPR) ಸೌಲಭ್ಯವನ್ನು ಆರಂಭಿಸಲಾಗಿದೆ. ಆಯುರ್ವೇದ ಆವಿಷ್ಕಾರಕರು ಮತ್ತು ಉದ್ಯಮಿಗಳಲ್ಲಿ ಬೌದ್ಧಿಕ ಸ್ವತ್ತಿನ ರಕ್ಷಣೆಯ ಕುರಿತು ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಇದರಿಂದ ಹೊಸ ಆವಿಷ್ಕಾರಗಳನ್ನು ಉತ್ಪನ್ನಗಳಾಗಿ ಅಭಿವೃದ್ಧಿಪಡಿಸಿ ವಾಣಿಜ್ಯೀಕರಣಗೊಳಿಸುವ ಹಂತದಲ್ಲಿ ಅವುಗಳಿಗೆ ಸೂಕ್ತ ರಕ್ಷಣೆ ಒದಗಿಸಲು ನೆರವಾಗಲಿದೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ.
AIIA-iCAINE ಕೇಂದ್ರವನ್ನು 2021ರ ಅಕ್ಟೋಬರ್ 29ರಂದು ಕೇಂದ್ರ ಆಯುಷ್ ಸಚಿವಾಲಯದ ಆಶ್ರಯದಲ್ಲಿ ಸ್ಥಾಪಿಸಲಾಗಿತ್ತು. ಇದು ಭಾರತದ ಸಾರ್ವಜನಿಕ ವಲಯದ ಮೊದಲ ಆಯುರ್ವೇದ ಉದ್ಯಮ ಇನ್ಕ್ಯುಬೇಟರ್ ಎಂಬ ಮಾನ್ಯತೆ ಹೊಂದಿದೆ.


