ನವದೆಹಲಿ: ಭಾರತದ ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯ ಮೇಲ್ವಿಚಾರಣೆ, ದತ್ತಾಂಶ ವಿಶ್ಲೇಷಣೆ ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ರಾಷ್ಟ್ರೀಯ ಕಾರ್ಯತಂತ್ರದ ವ್ಯಾಪಾರ ಕಮಾಂಡ್ ಕೇಂದ್ರವನ್ನು (NSTCC) ನವದೆಹಲಿಯಲ್ಲಿ ಉದ್ಘಾಟಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಾರ, ಈ ಕೇಂದ್ರವು ದೇಶದ ವ್ಯಾಪಾರ ವಹಿವಾಟಿನ ಸಮಗ್ರ ಚಿತ್ರಣವನ್ನು ಹಿರಿಯ ನೀತಿ ನಿರೂಪಕರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಒದಗಿಸಲಿದೆ. ದತ್ತಾಂಶ ಆಧಾರಿತ ವಿಶ್ಲೇಷಣೆ ಮತ್ತು ಸಾಕ್ಷ್ಯಾಧಾರಿತ ನಿರ್ಧಾರಗಳ ಮೂಲಕ ವ್ಯಾಪಾರ ನೀತಿಗಳ ಅನುಷ್ಠಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ರಫ್ತು ಉತ್ತೇಜನಾ ಯೋಜನೆಗಳು, ನಿಯಂತ್ರಣಾತ್ಮಕ ಅನುಮೋದನೆಗಳು, ಅರ್ಜಿಗಳ ವಿಲೇವಾರಿ ಮತ್ತು ಕಾರ್ಯಾಚರಣೆಯ ಪ್ರಮುಖ ಸೂಚಕಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುವ ವ್ಯವಸ್ಥೆಯನ್ನು NSTCC ಒಳಗೊಂಡಿರಲಿದೆ. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ (DGFT) ಪ್ರಮುಖ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಡ್ಯಾಶ್ಬೋರ್ಡ್ಗಳನ್ನೂ ಇದು ಒದಗಿಸಲಿದೆ.
ಆಮದುದಾರ–ರಫ್ತುದಾರರ ಕೋಡ್ (IEC), ಅಡ್ವಾನ್ಸ್ ಅಥರೈಸೇಷನ್, ರಫ್ತು ಉತ್ತೇಜನಾ ಬಂಡವಾಳ ಸರಕುಗಳ ಯೋಜನೆ (EPCG), ಮೂಲದ ಪ್ರಮಾಣಪತ್ರ (Certificate of Origin), SCOMET ವರ್ಗದ ಸರಕುಗಳು ಹಾಗೂ ನಿರ್ಬಂಧಿತ ಆಮದು–ರಫ್ತು ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮಾಹಿತಿಯೂ ಈ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ. ಇದರಿಂದ ವ್ಯಾಪಾರಕ್ಕೆ ಸಂಬಂಧಿಸಿದ ವಿವಿಧ ನಿಯಂತ್ರಣಾತ್ಮಕ ಮತ್ತು ಸೌಲಭ್ಯ ಕಲ್ಪಿಸುವ ಪ್ರಕ್ರಿಯೆಗಳ ಮೇಲ್ವಿಚಾರಣೆಗೆ ನೆರವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪಿಯೂಷ್ ಗೋಯಲ್, ವ್ಯಾಪಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ದತ್ತಾಂಶ ಮತ್ತು ದೃಢವಾದ ಸಾಕ್ಷ್ಯಗಳ ಆಧಾರದಲ್ಲಿ ಕೈಗೊಳ್ಳಲು ಇಂತಹ ವ್ಯವಸ್ಥೆಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಇದೇ ವೇಳೆ, ವಿವಿಧ ಸಚಿವಾಲಯಗಳನ್ನು ಒಳಗೊಂಡ ಅಂತರ-ಸಚಿವಾಲಯ ಸಮಿತಿಯ ಸಭೆಗಳನ್ನು ನಿಯಮಿತವಾಗಿ ನಡೆಸುವಂತೆ ಅವರು ಸೂಚಿಸಿದರು. ಬಾಕಿ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ, ಅವುಗಳ ವಿಲೇವಾರಿಯನ್ನು ತ್ವರಿತಗೊಳಿಸುವ ಮೂಲಕ ಅರ್ಜಿದಾರರಿಗೆ ಸಕಾಲದಲ್ಲಿ ಸೇವೆ ಒದಗಿಸಬೇಕು ಎಂದು ಒತ್ತಿಹೇಳಿದರು.


