ಬಿಹಾರದಲ್ಲಿ ಪ್ರವಾಹದ ಆತಂಕ; ಗಂಗಾ ನದಿ ಕೊರೆತ ತೀವ್ರ, ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ

1 Min Read
1 Min Read

ಪಟನಾ: ನೇಪಾಳದಲ್ಲಿ ಉಂಟಾದ ಪ್ರವಾಹದ ಪರಿಣಾಮ ಬಿಹಾರದ ಗಡಿ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಹೆಚ್ಚಿರುವ ನಡುವೆಯೇ, ಭಾಗಲ್ಪುರ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಗಂಗಾ ನದಿಯ ಕೊರೆತ ತೀವ್ರಗೊಂಡಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

ಖರಿಕ್‌ ಬ್ಲಾಕ್‌ನ ಶಂಕರಪುರ ಪ್ರದೇಶದಲ್ಲಿ ನದಿಯ ನೀರಿನ ರಭಸ ಹಾಗೂ ಹೆಚ್ಚುತ್ತಿರುವ ಒತ್ತಡದಿಂದ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಗಂಗಾ ಕೊರೆತಕ್ಕೆ ದೇವಸ್ಥಾನ, ತಡೆಗೋಡೆ ಬಲಿ

ನೌಗಾಚಿಯಾ ಬ್ಲಾಕ್‌ನಲ್ಲಿ ಗಂಗಾ ನದಿಯ ತೀವ್ರ ಕೊರೆತದಿಂದ ಹಳೆಯ ದುರ್ಗಾ ದೇವಸ್ಥಾನ, ಹನುಮಾನ್ ದೇವಸ್ಥಾನ ಹಾಗೂ ಸುಮಾರು 500 ಮೀಟರ್‌ ಉದ್ದದ ಜಮೀನ್ದಾರಿ ತಡೆಗೋಡೆ ನದಿಗೆ ಕೊಚ್ಚಿಹೋಗಿವೆ.

ಪರಿಸ್ಥಿತಿ ಗಂಭೀರವಾಗಿರುವ ಪ್ರದೇಶಗಳಲ್ಲಿದ್ದ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಜಲ ಸಂಪನ್ಮೂಲ ಇಲಾಖೆಯ ಹಲವು ತಂಡಗಳು ನದಿ ಕೊರೆತವನ್ನು ನಿಯಂತ್ರಿಸಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಹಿರಿಯ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.

ಜಲ ಸಂಪನ್ಮೂಲ ಸಚಿವ ವಿಜಯ್ ಕುಮಾರ್ ಚೌಧರಿ ಮಾತನಾಡಿ, ಗಂಗಾ ನದಿಯ ಹರಿವಿನ ದಿಕ್ಕಿನಲ್ಲಿ ಅನಿರೀಕ್ಷಿತ ಬದಲಾವಣೆ ಉಂಟಾದ ಹಿನ್ನೆಲೆಯಲ್ಲಿ ಕೊರೆತ ತೀವ್ರಗೊಂಡಿದೆ ಎಂದು ತಿಳಿಸಿದ್ದಾರೆ. ಕೊರೆತ ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ

ಇದೇ ವೇಳೆ ಬಿಹಾರದ ಪ್ರಮುಖ ನದಿಗಳ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರಣ್, ವೈಶಾಲಿ, ಬೇಗುಸರಾಯ್, ಬಕ್ಸರ್, ಜೆಹಾನಾಬಾದ್, ನವಾಡಾ ಮತ್ತು ಔರಂಗಾಬಾದ್ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಪಾಯದ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹಾಗೂ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Share This Article