ವಿಶ್ವಸಂಸ್ಥೆ (ಯುಎನ್) ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಆರೋಪಗಳಿಗೆ ಭಾರತ ತೀವ್ರ ತಿರುಗೇಟು ನೀಡಿದೆ. ಗಡಿ ದಾಟಿ ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ಬಳಸುತ್ತಿರುವ ಪಾಕಿಸ್ತಾನವನ್ನು ಭಾರತ ಖಂಡಿಸಿದ್ದು, ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಅಖಂಡ ಅಂಗವಾಗಿದ್ದು, ಈ ವಾಸ್ತವವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನೈಸರ್ಗಿಕ ಸಂಪನ್ಮೂಲಗಳ ಆಡಳಿತ (Natural Resources Governance) ಕುರಿತ ಉನ್ನತ ಮಟ್ಟದ ಮುಕ್ತ ಚರ್ಚೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪಿ. ಹರೀಶ್ ಈ ಹೇಳಿಕೆ ನೀಡಿದರು.
ಪಾಕಿಸ್ತಾನವು ಉನ್ನತ ಮಟ್ಟದ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಜಮ್ಮು-ಕಾಶ್ಮೀರವು ಹಿಂದೆ, ಈಗ ಮತ್ತು ಮುಂದೆಯೂ ಭಾರತದ ಅವಿಭಾಜ್ಯ ಹಾಗೂ ಅಖಂಡ ಭಾಗವಾಗಿಯೇ ಉಳಿಯಲಿದೆ. ಇದು ಭಾರತದ ಸಂವಿಧಾನಾತ್ಮಕ ಮತ್ತು ಕಾನೂನುಬದ್ಧ ಸತ್ಯವಾಗಿದ್ದು, ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಅದನ್ನು ನಿರ್ಲಕ್ಷಿಸುತ್ತಿದೆ ಎಂದು ಹೇಳಿದರು.
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಏಕೈಕ ವಿಷಯವೆಂದರೆ, ಪಾಕಿಸ್ತಾನವು ಭಾರತದ ಸಾರ್ವಭೌಮ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದಾಗಿದೆ ಎಂದು ಹರೀಶ್ ಸ್ಪಷ್ಟಪಡಿಸಿದರು.
ಸಿಂಧು ಜಲ ಒಪ್ಪಂದ ಕುರಿತು ಮಾತನಾಡಿದ ಅವರು, ಗಡಿ ದಾಟಿ ಭಯೋತ್ಪಾದನೆಯನ್ನು ಪಾಕಿಸ್ತಾನ ತನ್ನ ರಾಜ್ಯ ನೀತಿಯ ಭಾಗವಾಗಿ ಬಳಸುತ್ತಿರುವಾಗ ಪರಸ್ಪರ ವಿಶ್ವಾಸ ಮತ್ತು ಸದ್ಭಾವನೆಯ ಆಧಾರದ ಮೇಲೆ ಸಹಕಾರ ಸಾಧ್ಯವಿಲ್ಲ ಎಂದು ಹೇಳಿದರು. ಇದೇ ಕಾರಣದಿಂದ ಸಿಂಧು ಜಲ ಒಪ್ಪಂದದ ಕುರಿತು ಭಾರತದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಅವರು ಪುನರುಚ್ಚರಿಸಿದರು.
ತಮ್ಮ ಭಾಷಣದ ಅಂತ್ಯದಲ್ಲಿ, ಇತರ ರಾಷ್ಟ್ರಗಳ ಬಗ್ಗೆ ಟೀಕೆ ಮಾಡುವ ಮೊದಲು ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಭಾರತ ಕಟುವಾಗಿ ಸಲಹೆ ನೀಡಿತು.


