ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪರಸ್ಪರ ದೇಶಗಳಲ್ಲಿ ವಾಸಿಸುತ್ತಿರುವ ತಮ್ಮ ನಾಗರಿಕರ ಸುರಕ್ಷತೆ, ಗೌರವ ಹಾಗೂ ಕಲ್ಯಾಣವನ್ನು ಖಾತ್ರಿಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿವೆ.
ಈ ಸಂಬಂಧ ಭಾರತ–ಯುಎಇ ಕಾನ್ಸುಲರ್ ವ್ಯವಹಾರಗಳ ಜಂಟಿ ಸಮಿತಿಯ (JCCA) 7ನೇ ಸಭೆ ನವದೆಹಲಿಯಲ್ಲಿ ನಡೆಯಿತು.
ಸಭೆಯ ಸಹಾಧ್ಯಕ್ಷತೆಯನ್ನು ಭಾರತದ ಕಾನ್ಸುಲರ್, ಪಾಸ್ಪೋರ್ಟ್, ವೀಸಾ ಮತ್ತು ವಿದೇಶದಲ್ಲಿರುವ ಭಾರತೀಯರ ವ್ಯವಹಾರಗಳ ಕಾರ್ಯದರ್ಶಿ ಶ್ರೀಪ್ರಿಯಾ ರಂಗನಾಥನ್ ಹಾಗೂ ಯುಎಇ ವಿದೇಶಾಂಗ ಸಚಿವಾಲಯದ ಅಂಡರ್ಸೆಕ್ರೆಟರಿ ಒಬೈದ್ ಮೊಹಮ್ಮದ್ ಅಲ್ಹೆಸನ್ ಅಲ್ಶಮ್ಸಿ ವಹಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಸಭೆಯಲ್ಲಿ ಉಭಯ ದೇಶಗಳು ತಮ್ಮ ಸಮುದಾಯದ ಕಲ್ಯಾಣ ಮತ್ತು ಹಿತಾಸಕ್ತಿಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿ ಹೇಳಿದವು. ಅಲ್ಲದೆ, ಕಾನ್ಸುಲರ್ ಸೇವೆಗಳು, ವೀಸಾ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಒಪ್ಪಿಗೆ ಸೂಚಿಸಲಾಯಿತು.
2025ರ ನವೆಂಬರ್ನಲ್ಲಿ ಅಬುಧಾಬಿಯಲ್ಲಿ ನಡೆದ ಹಿಂದಿನ JCCA ಸಭೆಯ ನಂತರದ ಪ್ರಗತಿಯನ್ನು ಎರಡೂ ದೇಶಗಳ ಪ್ರತಿನಿಧಿಗಳು ಪರಿಶೀಲಿಸಿದರು. ಪ್ರಮುಖ ಕಾನ್ಸುಲರ್ ವಿಷಯಗಳಲ್ಲಿ ನಿರಂತರ ಸಮನ್ವಯ ಮತ್ತು ಸಂವಾದ ನಡೆಯುತ್ತಿರುವುದನ್ನು ಉಭಯ ದೇಶಗಳು ಸ್ವಾಗತಿಸಿದವು.
ಇದೇ ವೇಳೆ, ಭಾರತದ ಡಿಜಿಲಾಕರ್ (DigiLocker) ವ್ಯವಸ್ಥೆಯನ್ನು ಯುಎಇಯ ಡಿಜಿಟಲ್ ವೇದಿಕೆಗಳೊಂದಿಗೆ ಏಕೀಕರಿಸುವ ಕುರಿತು ಪ್ರತ್ಯೇಕ ಸಭೆ ನಡೆಯಿತು.
ಈ ವ್ಯವಸ್ಥೆಯಿಂದ ಯುಎಇಯಲ್ಲಿ ಉದ್ಯೋಗದಲ್ಲಿರುವ ಭಾರತೀಯ ವೃತ್ತಿಪರರ ಶೈಕ್ಷಣಿಕ ದಾಖಲೆಗಳ ದೃಢೀಕರಣ ಪ್ರಕ್ರಿಯೆ ಸುಲಭವಾಗಲಿದ್ದು, ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವಾಲಯ ತಿಳಿಸಿದೆ.
ಉಭಯ ದೇಶಗಳ ಪರಸ್ಪರ ಒಪ್ಪಿಗೆಯ ದಿನಾಂಕದಲ್ಲಿ ಮುಂದಿನ JCCA ಸಭೆಯನ್ನು ಅಬುಧಾಬಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.


