ಮಾಸ್ಕೋ/ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಎರಡೂ ದೇಶಗಳು ಪರಸ್ಪರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿವೆ. ದಾಳಿಗಳಲ್ಲಿ ಎರಡೂ ದೇಶಗಳಲ್ಲಿ ಒಟ್ಟು ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.
ಉಕ್ರೇನ್ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ನೂರಾರು ಡ್ರೋನ್‌ಗಳನ್ನು ಹಾರಿಸಿದ್ದು, ಯುದ್ಧ ಆರಂಭವಾದ ಬಳಿಕ ರಷ್ಯಾ ವಿರುದ್ಧ ಕೀವ್ ನಡೆಸಿದ ಅತಿದೊಡ್ಡ ವಾಯುದಾಳಿಗಳಲ್ಲಿ ಇದೂ ಒಂದಾಗಿದೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ರಷ್ಯಾದ ದಕ್ಷಿಣ-ಪಶ್ಚಿಮ ಭಾಗದಲ್ಲಿರುವ ರೋಸ್ತೋವ್ ಪ್ರದೇಶದ ಮೂರು ಪಟ್ಟಣಗಳನ್ನು ಗುರಿಯಾಗಿಸಿಕೊಂಡ ಡ್ರೋನ್ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. 150ಕ್ಕೂ ಹೆಚ್ಚು ಡ್ರೋನ್‌ಗಳು ದಾಳಿಯಲ್ಲಿ ಭಾಗಿಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಿಂದ ಹಲವು ಮನೆಗಳು ಹಾಗೂ ರೈಲು ನಿಲ್ದಾಣಕ್ಕೆ ಹಾನಿಯಾಗಿದ್ದು, ಅರಣ್ಯ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಂಡಿದೆ.
ಮಾಸ್ಕೋ ಪ್ರದೇಶದಲ್ಲಿ ಉಕ್ರೇನ್‌ನ ಡ್ರೋನ್ ಖಾಸಗಿ ಮನೆಯೊಂದಕ್ಕೆ ಅಪ್ಪಳಿಸಿದ ಪರಿಣಾಮ 83 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪೊಡೋಲ್ಸ್ಕ್‌ನಲ್ಲಿರುವ ವೈಲ್ಡ್‌ಬೆರೀಸ್ ಗೋದಾಮಿನಲ್ಲೂ ಉಕ್ರೇನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಸ್ಕೋ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ.
ರಷ್ಯಾ ರಕ್ಷಣಾ ಸಚಿವಾಲಯದ ಪ್ರಕಾರ, ರಾತ್ರೋರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 822 ಉಕ್ರೇನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.
ಉಕ್ರೇನ್‌ನಲ್ಲೂ ರಷ್ಯಾ ದಾಳಿ
ಇದೇ ವೇಳೆ ಉಕ್ರೇನ್‌ನ ವಿವಿಧ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಪ್ರಕಾರ, ಕ್ರಿವಿ ರಿಹ್ ನಗರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ.
ಸುಮಿ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಒಬ್ಬರು ಮೃತಪಟ್ಟರೆ, ಝಪೊರಿಝಿಯಾ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕ್ರಿವಿ ರಿಹ್‌ನಲ್ಲಿರುವ ಲೋಹ ಸಂಸ್ಕರಣಾ ಘಟಕ ಹಾಗೂ ಕೀವ್‌ನಲ್ಲಿರುವ ಹಲವು ಸೇನಾ-ಕೈಗಾರಿಕಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಪರಸ್ಪರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ನಾಗರಿಕ ಪ್ರದೇಶಗಳ ಮೇಲಿನ ದಾಳಿಗಳಿಂದ ಆತಂಕ ಹೆಚ್ಚಾಗಿದೆ.


