ಜಕಾರ್ತಾ: ಇಂಡೋನೇಷ್ಯಾದಲ್ಲಿ ಸಂಭವಿಸಿದ ಪ್ರಬಲ 7.7 ತೀವ್ರತೆಯ ಭೂಕಂಪದ ಹಿನ್ನೆಲೆಯಲ್ಲಿ ಪೂರ್ವ ನುಸಾ ತೆಂಗಾರಾ ಪ್ರಾಂತ್ಯದಲ್ಲಿ 14 ದಿನಗಳ ತುರ್ತು ಪ್ರತಿಕ್ರಿಯಾ ಅವಧಿಯನ್ನು ಘೋಷಿಸಲಾಗಿದೆ.
ಫ್ಲೊರೆಸ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ನಿನ್ನೆ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿತ್ತು. ಇದರ ಬೆನ್ನಲ್ಲೇ ಪೂರ್ವ ನುಸಾ ತೆಂಗಾರಾ ಗವರ್ನರ್ ಮೆಲ್ಕಿ ಲಕಾ ಲೇನಾ ಹೊರಡಿಸಿರುವ ಆದೇಶದಂತೆ ಈ ತುರ್ತು ಪರಿಸ್ಥಿತಿ ಈ ತಿಂಗಳ 28ರವರೆಗೆ ಜಾರಿಯಲ್ಲಿರಲಿದೆ.
ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ, ಜನರ ಸ್ಥಳಾಂತರ, ಪರಿಹಾರ ಸಾಮಗ್ರಿಗಳ ವಿತರಣೆ ಹಾಗೂ ಪುನರ್ವಸತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
51 ಮಂದಿ ಸಾವು, 113 ಜನರಿಗೆ ಗಾಯ
ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, ಭೂಕಂಪದ ಬಳಿಕ ಸಂಭವಿಸಿದ 341 ಭೂಕಂಪೋತ್ತರ ಕಂಪನಗಳ (ಆಫ್ಟರ್ಶಾಕ್ಗಳ) ಪರಿಣಾಮ ಸೇರಿದಂತೆ ಒಟ್ಟು 51 ಮಂದಿ ಮೃತಪಟ್ಟಿದ್ದು, 113 ಜನರು ಗಾಯಗೊಂಡಿದ್ದಾರೆ.
ಪ್ರದೇಶದಾದ್ಯಂತ ನೂರಾರು ಕಟ್ಟಡಗಳು ಹಾನಿಗೊಳಗಾಗಿವೆ. ಭೂಕಂಪದ ಹಿನ್ನೆಲೆಯಲ್ಲಿ ಪೂರ್ವ ನುಸಾ ತೆಂಗಾರಾ ಪ್ರಾಂತ್ಯದ ಹಲವು ವಿಮಾನಗಳ ಸೇವೆಯನ್ನೂ ರದ್ದುಗೊಳಿಸಲಾಗಿದೆ.
ಕಟ್ಟಡಗಳ ಅವಶೇಷಗಳಡಿ ಜನ ಸಿಲುಕಿರುವ ಆತಂಕ
ಹಲವು ಪ್ರದೇಶಗಳಲ್ಲಿ ಹಾನಿಗೊಳಗಾದ ಕಟ್ಟಡಗಳೊಳಗೆ ಇನ್ನೂ ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಸಿಲುಕಿರುವವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಭೂಕಂಪದಿಂದಾಗಿ ಕೆಲವು ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಿದ್ದು, ರಸ್ತೆಗಳಿಗೆ ಅವಶೇಷಗಳು ಬಿದ್ದಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳಿಗೂ ತೊಂದರೆಯಾಗಿದೆ.
ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಆಫ್ಟರ್ಶಾಕ್ಗಳ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.


