ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುನೈಟೆಡ್ ಕಿಂಗ್ಡಮ್ (ಯುಕೆ) ನೂತನ ಪ್ರಧಾನಿ ಆಂಡಿ ಬರ್ನ್ಹ್ಯಾಮ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಉಭಯ ನಾಯಕರು ತಂತ್ರಜ್ಞಾನ, ನವೋದ್ಯಮ, ರಕ್ಷಣಾ ಕ್ಷೇತ್ರ, ಭದ್ರತೆ, ಶುದ್ಧ ಇಂಧನ, ಶಿಕ್ಷಣ ಹಾಗೂ ಜನ-ಜನರ ಬಾಂಧವ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತ–ಯುಕೆ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು (Comprehensive Strategic Partnership) ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಜಾರಿಗೆ ಬಂದಿರುವ ಭಾರತ–ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (Comprehensive Economic and Trade Agreement – CETA) ಒದಗಿಸಿರುವ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಎರಡೂ ರಾಷ್ಟ್ರಗಳು ನಿಕಟವಾಗಿ ಸಹಕರಿಸಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಸಹಕಾರದಿಂದ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ನ ಜನರ ಸಮೃದ್ಧಿ ಹಾಗೂ ಕಲ್ಯಾಣಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರು ಯುಕೆ ಪ್ರಧಾನಿ ಆಂಡಿ ಬರ್ನ್ಹ್ಯಾಮ್ ಅವರಿಗೆ ಯಶಸ್ವಿ ಆಡಳಿತಾವಧಿಗೆ ಶುಭಾಶಯಗಳನ್ನು ಕೋರಿದ್ದಾರೆ.


