ದಕ್ಷಿಣ ಅಮೆರಿಕದ ಗಯಾನಾ ಕರಾವಳಿಯ ಸಮುದ್ರದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಂವಿ ಬರಿಮಾ (MV Barima) ಫೆರ್ರಿ ದೋಣಿ ಮುಳುಗಿದ ಪರಿಣಾಮ ಭಾರೀ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ 67 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.
ಸ್ಥಳೀಯ ಅಧಿಕಾರಿಗಳ ಮಾಹಿತಿ ಪ್ರಕಾರ, ದೋಣಿಯಲ್ಲಿ 116 ಪ್ರಯಾಣಿಕರು ಹಾಗೂ 17 ಸಿಬ್ಬಂದಿ ಸೇರಿ ಒಟ್ಟು 133 ಮಂದಿ ಪ್ರಯಾಣಿಸುತ್ತಿದ್ದರು. ರಾಜಧಾನಿ ಜಾರ್ಜ್ಟೌನ್ನಿಂದ ಹೊರಟ ಕೆಲವೇ ಹೊತ್ತಿನಲ್ಲಿ ದೋಣಿ ಮಗುಚಿಬಿದ್ದಿದೆ.
ರಕ್ಷಿಸಲ್ಪಟ್ಟವರಲ್ಲಿ 15 ಮಕ್ಕಳು ಸೇರಿದ್ದಾರೆ. ಗಯಾನಾ ಪ್ರಧಾನಿ ಮಾರ್ಕ್ ಫಿಲಿಪ್ಸ್ ಅವರ ಪ್ರಕಾರ, ರಕ್ಷಿಸಲ್ಪಟ್ಟವರಲ್ಲಿ 41 ಪುರುಷರು ಮತ್ತು 11 ಮಹಿಳೆಯರು ಇದ್ದಾರೆ. ಉಳಿದವರು ಮಕ್ಕಳು.
ದೋಣಿ ನಿಗದಿತ ತೂಕದ ಮಿತಿಯಲ್ಲೇ ಸಂಚರಿಸುತ್ತಿದ್ದು, 300ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಪರವಾನಗಿ ಹೊಂದಿತ್ತು ಎಂದು ಪ್ರಧಾನಿ ಫಿಲಿಪ್ಸ್ ತಿಳಿಸಿದ್ದಾರೆ.
ಸಾರ್ವಜನಿಕ ಕಾಮಗಾರಿಗಳ ಸಚಿವ ಜುವಾನ್ ಎಡ್ಗಿಲ್ ಮಾತನಾಡಿ, ಸ್ಥಳೀಯ ಕಾಲಮಾನ ರಾತ್ರಿ 11.01ಕ್ಕೆ ತುರ್ತು ಸಹಾಯ ಸಂದೇಶ (ಡಿಸ್ಟ್ರೆಸ್ ಕಾಲ್) ಬಂದ ತಕ್ಷಣವೇ ಸರ್ಕಾರದ ರಕ್ಷಣಾ ತಂಡಗಳು ಹಾಗೂ ಖಾಸಗಿ ದೋಣಿಗಳ ನೆರವಿನಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಪತ್ತೆಯಾದವರಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಜೀವಗಳನ್ನು ರಕ್ಷಿಸಲು ತುರ್ತು ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


