ಹೈದರಾಬಾದ್: ತೆಲುಗು ನಟ ನಾನಿ ಅಭಿನಯದ ಬಹುನಿರೀಕ್ಷಿತ ಪ್ಯಾನ್-ವಲ್ಡ್ ಸಿನಿಮಾ ‘ದಿ ಪ್ಯಾರಡೈಸ್’ (The Paradise) ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ. ಚಿತ್ರದ ಟೀಸರ್ ಆಗಸ್ಟ್ 6ರಂದು ಬಿಡುಗಡೆಯಾಗಲಿದೆ.
ಚಿತ್ರ ಘೋಷಣೆಯಾದ ದಿನದಿಂದಲೇ ‘ದಿ ಪ್ಯಾರಡೈಸ್’ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಚಿತ್ರದ ಶೀರ್ಷಿಕೆ ಅನಾವರಣ, ಮೊದಲ ಝಲಕ್ ಹಾಗೂ ‘ಆಯಾ ಶೇರ್’ ಹಾಡು ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿವೆ.
‘ದಸರಾ’ ಚಿತ್ರದ ಬಳಿಕ ನಿರ್ದೇಶಕ ಶ್ರೀಕಾಂತ್ ಒದೇಲಾ ಹಾಗೂ ನಟ ನಾನಿ ಮತ್ತೊಮ್ಮೆ ಕೈಜೋಡಿಸಿರುವ ಈ ಚಿತ್ರವನ್ನು ಅದ್ಧೂರಿ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಎಸ್ಎಲ್ವಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
1 ನಿಮಿಷ 35 ಸೆಕೆಂಡ್ ಅವಧಿಯ ಟೀಸರ್ ಚಿತ್ರದ ವಿಶಾಲ ಕಥಾ ಜಗತ್ತು ಹಾಗೂ ಭಾವನಾತ್ಮಕ ಕಥಾಹಂದರದ ಮೊದಲ ಪ್ರಮುಖ ಝಲಕ್ ನೀಡಲಿದೆ ಎಂಬ ನಿರೀಕ್ಷೆ ಇದೆ. ಚಿತ್ರದ ಪ್ರಚಾರ ಅಭಿಯಾನ ವೇಗ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಟೀಸರ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಚಿತ್ರದಲ್ಲಿ ನಾನಿ ವಿಭಿನ್ನ ಹಾಗೂ ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದು, ಶ್ರೀಕಾಂತ್ ಒದೇಲಾ ಅವರ ವಿಶಿಷ್ಟ ನಿರೂಪಣೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಚಿತ್ರದಲ್ಲಿ ಮೋಹನ್ ಬಾಬು, ಕಾಯಾಡು ಲೋಹರ್, ರಾಘವ್ ಜುಯಾಲ್, ಸೋನಾಲಿ ಕುಲಕರ್ಣಿ, ಸಂಪೂರ್ಣೇಶ್ ಬಾಬು ಹಾಗೂ ತನಿಕೆಲ್ಲ ಭರಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಾಂತ್ರಿಕವಾಗಿ ಕೂಡ ಚಿತ್ರ ಬಲಿಷ್ಠ ತಂಡವನ್ನು ಹೊಂದಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ, ಚೈ ಸಾಯಿ ಛಾಯಾಗ್ರಹಣ, ನವೀನ್ ನೂಲಿ ಸಂಕಲನ ಹಾಗೂ ಅವಿನಾಶ್ ಕೊಲ್ಲಾ ಕಲಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಬೆಂಗಾಲಿ, ಇಂಗ್ಲಿಷ್ ಹಾಗೂ ಸ್ಪ್ಯಾನಿಷ್ ಸೇರಿದಂತೆ ಎಂಟು ಭಾಷೆಗಳಲ್ಲಿ ‘ದಿ ಪ್ಯಾರಡೈಸ್’ ಬಿಡುಗಡೆಯಾಗಲಿದ್ದು, ಪ್ಯಾನ್-ವಲ್ಡ್ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬರಲಿದೆ.


