ನವದೆಹಲಿ: ‘ವಿಕಸಿತ ಭಾರತ’ ಗುರಿ ಸಾಧನೆಗೆ ವೇಗ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ನಿವಾಸದಲ್ಲಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಎರಡನೇ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಹಣಕಾಸು ಮತ್ತು ಆರ್ಥಿಕತೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸಚಿವಾಲಯಗಳು ಮತ್ತು ಇಲಾಖೆಗಳ ಮುಂದಿನ ಕಾರ್ಯಸೂಚಿಯನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಪ್ರಧಾನಿ ಮೋದಿ, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ತಂಡವಾಗಿ ಕಾರ್ಯನಿರ್ವಹಿಸುವ ಸಂಸ್ಕೃತಿ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಸರ್ಕಾರದ ಕಾರ್ಯವೈಖರಿಯಲ್ಲಿ ಇರುವ ಅಡ್ಡ (Horizontal) ಮತ್ತು ಲಂಬ (Vertical) ‘ಸೈಲೋ’ ಪದ್ಧತಿಯನ್ನು ಮುರಿದು, ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಸಮಗ್ರ ಫಲಿತಾಂಶ ನೀಡಬೇಕು ಎಂದು ಸೂಚಿಸಿದರು.
ಜನಕೇಂದ್ರಿತ ಆಡಳಿತವೇ ಸರ್ಕಾರದ ಪ್ರಮುಖ ಗುರಿಯಾಗಿರಬೇಕು ಎಂದು ಪ್ರಧಾನಿ ಹೇಳಿದರು. ಸರ್ಕಾರದ ಪ್ರತಿಯೊಂದು ನಿರ್ಧಾರ ಮತ್ತು ನೀತಿ ಸಾಮಾನ್ಯ ನಾಗರಿಕರ ಹಿತಾಸಕ್ತಿ ಹಾಗೂ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡೇ ರೂಪುಗೊಳ್ಳಬೇಕು ಎಂದು ಅವರು ತಿಳಿಸಿದರು.
ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರೀ ಹೂಡಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡಬೇಕೆಂದು ಪ್ರಧಾನಿ ಕರೆ ನೀಡಿದರು. ಪ್ರಮುಖ ಕ್ಷೇತ್ರಗಳಲ್ಲಿ ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ತಂತ್ರಜ್ಞಾನ ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಇಂಧನ ಭದ್ರತೆ ರಾಷ್ಟ್ರೀಯ ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ನಾಗರಿಕರ ಕಲ್ಯಾಣಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಹೊಸ ಆವಿಷ್ಕಾರ, ಇಂಧನ ಮೂಲಗಳ ವೈವಿಧ್ಯೀಕರಣ ಹಾಗೂ ಉತ್ಪಾದನಾ ಸಾಮರ್ಥ್ಯ ವೃದ್ಧಿಯ ಮೂಲಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ, ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸೈಬರ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಪ್ರಧಾನಿ ಸೂಚಿಸಿದರು. ಡಿಜಿಟಲ್ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ರಕ್ಷಿಸಲು ಉದಯೋನ್ಮುಖ ಸೈಬರ್ ಬೆದರಿಕೆಗಳ ವಿರುದ್ಧ ನಿರಂತರ ಎಚ್ಚರಿಕೆ ಅಗತ್ಯ ಎಂದು ಹೇಳಿದರು.
ಸೈಬರ್ ಭದ್ರತಾ ಕ್ಷೇತ್ರದಲ್ಲಿ ಯುವ ಆವಿಷ್ಕಾರಕರು ಮತ್ತು ಉದ್ಯಮಿಗಳ ಹೆಚ್ಚಿನ ಭಾಗವಹಿಸುವಿಕೆಗೆ ಉತ್ತೇಜನ ನೀಡಬೇಕು. ಇದು ದೇಶವ್ಯಾಪಿ ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ದೇಶದ ಪ್ರಮುಖ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಬಗ್ಗೆ ಸಮರ್ಪಕ ಮತ್ತು ಸಕ್ರಿಯ ಮಾಹಿತಿ ಹಂಚಿಕೆ ನಡೆಸುವ ಮೂಲಕ ತಪ್ಪು ಮಾಹಿತಿ ಹಾಗೂ ಆಧಾರರಹಿತ ಆತಂಕಗಳನ್ನು ದೂರ ಮಾಡಬೇಕೆಂದೂ ಅವರು ಸೂಚಿಸಿದರು.
ಉದ್ಯಮ ವಲಯದ ಸಹಭಾಗಿತ್ವದಲ್ಲಿ ಹೊಸ ಶೈಕ್ಷಣಿಕ ಕೋರ್ಸ್ಗಳನ್ನು ರೂಪಿಸಿ, ಭವಿಷ್ಯದ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಯುವಜನರಿಗೆ ಕಲ್ಪಿಸಬೇಕು ಎಂದು ಪ್ರಧಾನಿ ಹೇಳಿದರು. ಜೊತೆಗೆ, ಸರ್ಕಾರವು ಸದಾ ಯುವ, ಚುರುಕು ಮತ್ತು ಭವಿಷ್ಯದ ಸವಾಲುಗಳಿಗೆ ಹೊಂದಿಕೊಳ್ಳುವ ಮನೋಭಾವ ಹೊಂದಿರಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ತಮ್ಮ ಇಲಾಖೆಗಳ ಪ್ರಗತಿ, ಆದ್ಯತೆಗಳು ಮತ್ತು ಅನುಷ್ಠಾನದ ಸವಾಲುಗಳ ಕುರಿತು ವಿವರವಾದ ಪ್ರಸ್ತುತಪಡಿಸಿದರು. ಸಭೆಯಲ್ಲಿ ಸಚಿವ ಸಂಪುಟ ಕಾರ್ಯದರ್ಶಿ, ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


