ಪೇಪರ್ ಲೀಕ್ ಆರೋಪಿಗಳಿಗೆ ತ್ವರಿತ ಶಿಕ್ಷೆ; ಫಾಸ್ಟ್‌ಟ್ರ್ಯಾಕ್ ಕೋರ್ಟ್ ಸ್ಥಾಪನೆಗೆ ಕೇಂದ್ರದ ನಿರ್ಧಾರ

1 Min Read
1 Min Read

ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸಲು ದೇಶಾದ್ಯಂತ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳನ್ನು (Fast-Track Courts) ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರಕಟಣೆ ನೀಡಿರುವ ಪ್ರಧಾನಿ ಮೋದಿ, “ದೇಶದ ಯುವಕರ ಕಲ್ಯಾಣ ಮತ್ತು ಅವರ ಭವಿಷ್ಯಕ್ಕಿಂತ ಮುಖ್ಯವಾದುದು ಮತ್ತೊಂದಿಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ” ಎಂದು ಹೇಳಿದ್ದಾರೆ.

ದೆಹಲಿ ಜಂತರ್ ಮಂತರ್‌ನಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.

ಈ ಸಂಬಂಧ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿರುವ ಪ್ರಧಾನಿ, ಯುವಕರ ಭವಿಷ್ಯದೊಂದಿಗೆ ಆಟವಾಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಹಲವು ಕ್ರಮಗಳ ಭಾಗವಾಗಿಯೇ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಯುವಕರ ಕಲ್ಯಾಣ ಮತ್ತು ಉಜ್ವಲ ಭವಿಷ್ಯವೇ ಮೋದಿ ಸರ್ಕಾರದ ಅತ್ಯುನ್ನತ ಆದ್ಯತೆ ಹಾಗೂ ಸಂಕಲ್ಪವಾಗಿದೆ” ಎಂದು ಹೇಳಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಮೂಲಕ ಯುವಕರ ಭವಿಷ್ಯದೊಂದಿಗೆ ಆಟವಾಡುವವರ ವಿರುದ್ಧ ಈ ನಿರ್ಧಾರ ಐತಿಹಾಸಿಕ ಹೆಜ್ಜೆಯಾಗಿದ್ದು, ನ್ಯಾಯದ ಪ್ರಕ್ರಿಯೆಯನ್ನು ವೇಗಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಇದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

Share This Article