‘ಜನ ನಾಯಕನ್’ ತಂಡದ ಭಾವುಕ ನೆನಪು; ವಿಜಯ್ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ವರ್ಷಿಣಿ ನಟರಾಜನ್

2 Min Read
2 Min Read

ಚೆನ್ನೈ: ನಟ ವಿಜಯ್ ಅಭಿನಯದ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ‘ಜನ ನಾಯಕನ್’ (Jana Nayagan) ಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಚಿತ್ರದ ಕಾಸ್ಟ್ಯೂಮ್ ತಂಡದ ಸದಸ್ಯೆ ವರ್ಷಿಣಿ ನಟರಾಜನ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಬರಹವನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ನಟಿ ಪೂಜಾ ಹೆಗ್ಡೆ ಕೂಡ ಚಿತ್ರದ ತೆರೆಮರೆಯ (Behind the Scenes) ಚಿತ್ರಗಳನ್ನು ಹಂಚಿಕೊಂಡು ವಿಜಯ್ ಅವರೊಂದಿಗಿನ ನೆನಪುಗಳನ್ನು ಸ್ಮರಿಸಿದ್ದರು. ಇದೀಗ ಕಾಸ್ಟ್ಯೂಮ್ ಡಿಸೈನರ್ ಪಲ್ಲವಿ ಸಿಂಗ್ ಅವರ ತಂಡದಲ್ಲಿ ಕೆಲಸ ಮಾಡಿದ್ದ ವರ್ಷಿಣಿ ನಟರಾಜನ್ ತಮ್ಮ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಬರಹದಲ್ಲಿ, ಬಾಲ್ಯದಲ್ಲಿ ವಿಜಯ್ ಅವರ ‘ಆಳ್ ತೊಟ್ಟ ಭೂಪತಿ’ ಹಾಡಿಗೆ ನೃತ್ಯ ಮಾಡುತ್ತಿದ್ದ ದಿನಗಳಿಂದ ಹಿಡಿದು, ಬೆಂಗಳೂರಿನಲ್ಲಿ ‘ಬೀಸ್ಟ್’ ಚಿತ್ರವನ್ನು ಮೊದಲ ಸಾಲಿನಲ್ಲಿ ಕುಳಿತು ನೋಡಿದ ಕ್ಷಣಗಳವರೆಗೆ ನೆನಪಿಸಿಕೊಂಡಿದ್ದಾರೆ.

“ಒಂದು ದಿನ ನಾನು ಆರಾಧಿಸುತ್ತಿದ್ದ ನಟ ವಿಜಯ್ ಅವರೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ” ಎಂದು ಅವರು ಹೇಳಿದ್ದಾರೆ.

‘ಹಲಮಿತಿ ಹಬಿಬೋ’ ಹಾಡು ನೋಡಿದ ಬಳಿಕ, “ಒಂದು ದಿನ ಅದೃಷ್ಟವಿದ್ದರೆ ವಿಜಯ್ ಚಿತ್ರದ ಒಂದೇ ಒಂದು ಹಾಡಿನಲ್ಲಾದರೂ ಕೆಲಸ ಮಾಡಬೇಕು” ಎಂದುಕೊಂಡಿದ್ದೆ. ಆದರೆ ಜೀವನ ನನಗೆ ಅದಕ್ಕಿಂತ ದೊಡ್ಡ ಉಡುಗೊರೆ ನೀಡಿತು. ಒಂದು ಹಾಡು ಮಾತ್ರವಲ್ಲ, ಇಡೀ ಚಿತ್ರದಲ್ಲಿ, ಹಲವು ಹಾಡುಗಳು, ಹಲವು ದೃಶ್ಯಗಳು ಮತ್ತು ಮರೆಯಲಾಗದ ನೆನಪುಗಳೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು ಎಂದು ಅವರು ಬರೆದಿದ್ದಾರೆ.

ಈ ಅವಕಾಶ ನೀಡಿದ ತಮ್ಮ ಮಾರ್ಗದರ್ಶಕಿ ಪಲ್ಲವಿ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸಿರುವ ವರ್ಷಿಣಿ, “ನನ್ನ ಮೇಲೆ ನಂಬಿಕೆ ಇಟ್ಟು ಈ ಅವಕಾಶ ನೀಡಿದ ಅವರ ವಿಶ್ವಾಸವೇ ನನ್ನ ಬದುಕನ್ನು ಬದಲಿಸಿತು” ಎಂದು ಹೇಳಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಕೈಬಿಡುವ ಯೋಚನೆ ಬಂದಿದ್ದರೂ, ವಿಜಯ್ ಅವರ ಸರಳತೆ, ಶಾಂತ ಸ್ವಭಾವ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಆಶಾವಾದಿಯಾಗಿ ಮುಂದುವರಿಯುವ ಗುಣ ನನಗೆ ಸ್ಫೂರ್ತಿ ನೀಡಿತು ಎಂದು ಅವರು ತಿಳಿಸಿದ್ದಾರೆ.

ಚಿತ್ರರಂಗಕ್ಕಿಂತ ಹೆಚ್ಚಾಗಿ ವಿಜಯ್ ಅವರಿಂದ ಕಲಿತ ದೊಡ್ಡ ಪಾಠ ಸರಳತೆಯೇ ನಿಜವಾದ ಶಕ್ತಿ, ಮೌನಕ್ಕೂ ತನ್ನದೇ ಆದ ಸಾಮರ್ಥ್ಯವಿದೆ ಮತ್ತು ವಿನಯ ಎಂದಿಗೂ ಹಳೆಯದಾಗುವುದಿಲ್ಲ ಎಂಬುದಾಗಿದೆ. ಗುರಿಯ ಮೇಲೆ ನಂಬಿಕೆ ಇಟ್ಟು ನಿರಂತರವಾಗಿ ಶ್ರಮಿಸಿದರೆ ಕನಸುಗಳು ನನಸಾಗುತ್ತವೆ ಎಂಬುದನ್ನು ವಿಜಯ್ ಅವರಿಂದ ಕಲಿತಿದ್ದೇನೆ ಎಂದು ವರ್ಷಿಣಿ ನಟರಾಜನ್ ತಮ್ಮ ಭಾವನಾತ್ಮಕ ಸಂದೇಶದಲ್ಲಿ ಹೇಳಿದ್ದಾರೆ.

Share This Article