ನೀಟ್ ಪ್ರತಿಭಟನೆಗೆ ಬೆಂಬಲ: ಸಿಎಂ ವಿಜಯ್ ಮೌನ ಏಕೆ? – ಪಾ. ರಂಜಿತ್ ಪ್ರಶ್ನೆ

2 Min Read
2 Min Read

ಚೆನ್ನೈ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ನೀಟ್-ಯುಜಿ (NEET-UG) ಪ್ರತಿಭಟನೆಗೆ ಬೆಂಬಲ ಸೂಚಿಸಿ, ಚೆನ್ನೈನ ಎಗ್ಮೋರ್‌ನ ರಾಜರತ್ನಂ ಕ್ರೀಡಾಂಗಣದಲ್ಲಿ ನಿರ್ದೇಶಕ ಪಾ. ರಂಜಿತ್ ಅವರ ನೀಲಂ ಕಲ್ಚರಲ್ ಸೆಂಟರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯಲ್ಲಿ ನಿರ್ದೇಶಕರಾದ ವೆಟ್ರಿಮಾರನ್, ಅಮೀರ್, ನಟಿ-ಗಾಯಕಿ ಆಂಡ್ರಿಯಾ ಜೆರೆಮಿಯಾ, ಗಾಯಕ-ರ್ಯಾಪರ್ ಅರಿವು, ಸಂಗೀತ ನಿರ್ದೇಶಕ ಸಾಯಿ ಅಭ್ಯಾಂಕರ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪಾ. ರಂಜಿತ್, ನೀಟ್ ಪ್ರತಿಭಟನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮೌನ ವಹಿಸಿರುವುದನ್ನು ಪ್ರಶ್ನಿಸಿದರು.

“ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿರುವ ವಿಡಿಯೊಗಳನ್ನು ಮುಖ್ಯಮಂತ್ರಿ ನೋಡಿಲ್ಲವೇ? ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮೌನವಾಗಿರುವುದು ಏಕೆ? ಸರ್ಕಾರವೇ ವಿದ್ಯಾರ್ಥಿಗಳಿಗೆ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕು. ಜನರ ಪರ ನಿಲ್ಲುವ ಮುಖ್ಯಮಂತ್ರಿ ನಮಗೆ ಬೇಕು. ನೀಟ್ ವಿರೋಧದ ಹೋರಾಟ ಕೇವಲ ಘೋಷಣೆಯಾಗಿರಬಾರದು; ಮುಖ್ಯಮಂತ್ರಿ ಸ್ವತಃ ಈ ಹೋರಾಟದಲ್ಲಿ ಭಾಗಿಯಾಗಬೇಕು” ಎಂದು ಅವರು ಹೇಳಿದರು.

ಇದೇ ವೇಳೆ, ದಲಿತ ಸಮುದಾಯದ ವಿಚಾರಗಳಲ್ಲಿ ಸರ್ಕಾರದ ಸಚಿವರು ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದ ಪಾ. ರಂಜಿತ್, “ಮುಖ್ಯಮಂತ್ರಿ ವಿಜಯ್ ಅವರು ಎಂಟು ದಲಿತ ಸಚಿವರನ್ನು ನೇಮಕ ಮಾಡಿದ್ದಾರೆ. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಾದರೂ, ಸಚಿವ ವನ್ನಿ ಅರಸು ಹೊರತುಪಡಿಸಿ ಉಳಿದ ದಲಿತ ಸಚಿವರು ದಲಿತರ ಸಮಸ್ಯೆಗಳ ಬಗ್ಗೆ ಒಮ್ಮೆಯಾದರೂ ಮಾತನಾಡಿದ್ದಾರೆಯೇ?” ಎಂದು ಪ್ರಶ್ನಿಸಿದರು.

ನಿರ್ದೇಶಕ ವೆಟ್ರಿಮಾರನ್, ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

“ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬಂದಿರುವುದೇ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ನಮ್ಮ ಬೇಡಿಕೆ ‘ನ್ಯಾಯಸಮ್ಮತ ನೀಟ್’ ಅಲ್ಲ; ನೀಟ್ ಸಂಪೂರ್ಣ ರದ್ದಾಗಬೇಕು ಎಂಬುದಾಗಿದೆ. ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಒಂದು ವರ್ಷವನ್ನೇ ತ್ಯಾಗ ಮಾಡಬೇಕಾಗಿರುವುದು ನೋವಿನ ಸಂಗತಿ. ನೀಟ್ ವೈದ್ಯಕೀಯ ಶಿಕ್ಷಣವನ್ನು ನಮ್ಮಿಂದ ದೂರ ಮಾಡುತ್ತಿದೆ. ಈ ಪರೀಕ್ಷೆ ರದ್ದಾಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಅವರು ಹೇಳಿದರು.

ನಟಿ ಹಾಗೂ ಗಾಯಕಿ ಆಂಡ್ರಿಯಾ ಜೆರೆಮಿಯಾ, ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿ, ವಿದ್ಯಾರ್ಥಿಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಕವಿ ರವೀಂದ್ರನಾಥ ಟಾಗೋರ್ ಅವರ ‘ಗೀತಾಂಜಲಿ’ ಕೃತಿಯ ‘Where the Mind Is Without Fear’ ಕವಿತೆಯನ್ನು ಉಲ್ಲೇಖಿಸಿದ ಅವರು, “ಜ್ಞಾನ ಎಲ್ಲರಿಗೂ ಮುಕ್ತವಾಗಿರಬೇಕು. ಜ್ಞಾನ ನಮ್ಮ ಜನ್ಮಸಿದ್ಧ ಹಕ್ಕು. ಆ ಹಕ್ಕನ್ನು ವ್ಯವಸ್ಥೆ ನಿರಾಕರಿಸಿದರೆ, ಆ ವ್ಯವಸ್ಥೆಯಲ್ಲೇ ಬದಲಾವಣೆ ಆಗಬೇಕು” ಎಂದು ಹೇಳಿದರು.

Share This Article