ರಾಷ್ಟ್ರಪತಿ ದ್ರೌಪದಿ ಮುರ್ಮು ಮೂರು ರಾಷ್ಟ್ರಗಳ ಪ್ರವಾಸಕ್ಕೆ ಸಜ್ಜು; ಮೊಲ್ಡೋವಾ, ಉತ್ತರ ಮ್ಯಾಸಿಡೋನಿಯಾಗೆ ಮೊದಲ ಭೇಟಿ

1 Min Read
1 Min Read

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 19ರಿಂದ 25ರವರೆಗೆ ಮೊಲ್ಡೋವಾ, ಉತ್ತರ ಮ್ಯಾಸಿಡೋನಿಯಾ ಹಾಗೂ ರೊಮೇನಿಯಾ ರಾಷ್ಟ್ರಗಳಿಗೆ ಅಧಿಕೃತ (ರಾಜ್ಯ) ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪಶ್ಚಿಮ ವಿಭಾಗದ ಕಾರ್ಯದರ್ಶಿ ಸಿಬಿ ಜಾರ್ಜ್, ಈ ಮೂರು ರಾಷ್ಟ್ರಗಳ ಅಧ್ಯಕ್ಷರ ಆಹ್ವಾನದ ಮೇರೆಗೆ ರಾಷ್ಟ್ರಪತಿ ಮುರ್ಮು ಅವರ ಪ್ರವಾಸ ನಡೆಯುತ್ತಿದೆ ಎಂದು ತಿಳಿಸಿದರು.

ಈ ಪ್ರವಾಸವು ಐತಿಹಾಸಿಕ ಮಹತ್ವ ಹೊಂದಿದ್ದು, ಭಾರತದ ರಾಷ್ಟ್ರಪತಿಯೊಬ್ಬರು ಮೊಟ್ಟಮೊದಲ ಬಾರಿಗೆ ಮೊಲ್ಡೋವಾ ಮತ್ತು ಉತ್ತರ ಮ್ಯಾಸಿಡೋನಿಯಾ ರಾಷ್ಟ್ರಗಳಿಗೆ ದ್ವಿಪಕ್ಷೀಯ ಅಧಿಕೃತ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.

ಅಲ್ಲದೆ, ರೊಮೇನಿಯಾಗೆ ಭಾರತೀಯ ರಾಷ್ಟ್ರಪತಿಯ ರಾಜ್ಯಮಟ್ಟದ ಭೇಟಿ ಸುಮಾರು ಮೂರು ದಶಕಗಳ ಬಳಿಕ ನಡೆಯುತ್ತಿದೆ. ಇದಕ್ಕೂ ಮುನ್ನ 1994ರಲ್ಲಿ ಭಾರತೀಯ ರಾಷ್ಟ್ರಪತಿ ರೊಮೇನಿಯಾಗೆ ಭೇಟಿ ನೀಡಿದ್ದರು ಎಂದು ಸಿಬಿ ಜಾರ್ಜ್ ವಿವರಿಸಿದರು.

ಅವರು ಮಾತನಾಡಿ, ಈ ಪ್ರವಾಸವು ಮಧ್ಯ ಮತ್ತು ಪೂರ್ವ ಯುರೋಪ್ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.

ಈ ಭೇಟಿ ಮೂಲಕ ಆ ಪ್ರದೇಶದ ರಾಷ್ಟ್ರಗಳೊಂದಿಗೆ ಭಾರತದ ಪಾಲುದಾರಿಕೆ ಇನ್ನಷ್ಟು ಗಟ್ಟಿಯಾಗಲಿದ್ದು, ಯುರೋಪ್ ರಾಷ್ಟ್ರಗಳು ಹಾಗೂ ಯುರೋಪಿಯನ್ ಒಕ್ಕೂಟ (EU) ಜತೆಗಿನ ಭಾರತದ ಕಾರ್ಯತಂತ್ರದ ಸಹಭಾಗಿತ್ವಕ್ಕೂ ಇದು ಪೂರಕವಾಗಲಿದೆ ಎಂದು ಅವರು ತಿಳಿಸಿದರು.

Share This Article