ನವದೆಹಲಿ: ದೇಶದ ಪ್ರಸ್ತುತ ಜಿಡಿಪಿ (GDP) ಬೆಳವಣಿಗೆಯನ್ನು ತ್ವರಿತವಾಗಿ ಅಂದಾಜಿಸಲು ಹಾಗೂ ಆರ್ಥಿಕ ಚಟುವಟಿಕೆಗಳ ಕುರಿತು ಹೆಚ್ಚು ನಿಖರವಾದ ಮಾಹಿತಿ ಪಡೆಯಲು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಮಹತ್ವದ ಕ್ರಮ ಕೈಗೊಂಡಿದೆ.
MoSPI, ಇನ್ಸ್ಟಿಟ್ಯೂಟ್ ಆಫ್ ಡೇಟಾ ಎಂಜಿನಿಯರಿಂಗ್, ಅನಾಲಿಟಿಕ್ಸ್ ಆ್ಯಂಡ್ ಸೈನ್ಸ್ ಫೌಂಡೇಶನ್ (IDEAS) ಹಾಗೂ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಕೊಲ್ಕತ್ತಾ ಜೊತೆ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಲು ಎರಡು ತಿಳಿವಳಿಕೆ ಒಪ್ಪಂದಗಳಿಗೆ (MoUs) ಸಹಿ ಮಾಡಿದೆ.
ಈ ಸಹಯೋಗವು MoSPI ಮತ್ತು IDEAS ನಡುವಿನ ಜ್ಞಾನ ಹಂಚಿಕೆ ಹಾಗೂ ಸಂಶೋಧನಾ ಆಧಾರಿತ ಹೊಸ ವೇದಿಕೆಗೆ ದಾರಿ ಮಾಡಿಕೊಡಲಿದೆ. ಯೋಜನೆಯಡಿ MoSPI ಅಗತ್ಯ ಹಣಕಾಸು ನೆರವು ಹಾಗೂ ಸಂಬಂಧಿತ ದತ್ತಾಂಶವನ್ನು ಒದಗಿಸಲಿದೆ.
ಜಿಡಿಪಿ ಬೆಳವಣಿಗೆಯ ‘Nowcasting’ಗೆ ಸಾಫ್ಟ್ವೇರ್
IDEAS ಸಂಸ್ಥೆಯು ದೇಶದ ಜಿಡಿಪಿ ಬೆಳವಣಿಗೆಯನ್ನು ತ್ವರಿತವಾಗಿ ಅಂದಾಜಿಸಲು ಡೆಸ್ಕ್ಟಾಪ್ ಆಧಾರಿತ ಸಾಫ್ಟ್ವೇರ್ ಸಾಧನವನ್ನು ಅಭಿವೃದ್ಧಿಪಡಿಸಲಿದೆ.
ಈ ವ್ಯವಸ್ಥೆಯ ಮೂಲಕ ಲಭ್ಯವಿರುವ ವಿವಿಧ ಆರ್ಥಿಕ ಸೂಚಕಗಳು ಮತ್ತು ದತ್ತಾಂಶಗಳನ್ನು ವಿಶ್ಲೇಷಿಸಿ, ಅಧಿಕೃತ ಜಿಡಿಪಿ ಅಂಕಿಅಂಶಗಳು ಪ್ರಕಟವಾಗುವ ಮುನ್ನವೇ ಪ್ರಸ್ತುತ ಆರ್ಥಿಕ ಬೆಳವಣಿಗೆಯ ಸ್ಥಿತಿಗತಿಯನ್ನು ಅಂದಾಜಿಸಲು ನೆರವಾಗಲಿದೆ.
ಆರೋಗ್ಯ, ಪೌಷ್ಟಿಕತೆ ದತ್ತಾಂಶಕ್ಕೂ ಒತ್ತು
ಇದರ ಜೊತೆಗೆ, ಸರ್ಕಾರಿ ಆರೋಗ್ಯ, ಪೌಷ್ಟಿಕತೆ ಹಾಗೂ ಜನರ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳ ಆಡಳಿತಾತ್ಮಕ ದತ್ತಾಂಶವನ್ನು ಮನೆಮಟ್ಟದ NSS ದತ್ತಾಂಶದೊಂದಿಗೆ ಜೋಡಿಸುವ ಸಮನ್ವಯಿತ ಸೂಚಕ ಚೌಕಟ್ಟನ್ನೂ IDEAS ಅಭಿವೃದ್ಧಿಪಡಿಸಲಿದೆ.
ಈ ವ್ಯವಸ್ಥೆಯು ದೇಶದ ಜನರ ಆರೋಗ್ಯ, ಪೌಷ್ಟಿಕತೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸಮಗ್ರವಾಗಿ ಅರ್ಥೈಸಲು ಹಾಗೂ ನೀತಿ ರೂಪಿಸುವಿಕೆಯಲ್ಲಿ ದತ್ತಾಂಶ ಆಧಾರಿತ ನಿರ್ಧಾರಗಳಿಗೆ ನೆರವಾಗುವ ನಿರೀಕ್ಷೆಯಿದೆ.
MoSPI ಮತ್ತು ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳ ನಡುವಿನ ಈ ಸಹಯೋಗವು ಆರ್ಥಿಕ ಅಂಕಿಅಂಶಗಳ ವಿಶ್ಲೇಷಣೆಯನ್ನು ಮತ್ತಷ್ಟು ವೇಗಗೊಳಿಸುವುದರ ಜೊತೆಗೆ, ದತ್ತಾಂಶ ಆಧಾರಿತ ನೀತಿ ರೂಪಿಸುವಿಕೆಗೆ ಉತ್ತೇಜನ ನೀಡಲಿದೆ.


