ರಾಂಚಿ: ಜಾರ್ಖಂಡ್‌ನಾದ್ಯಂತ ಶ್ರೀ ಜಗನ್ನಾಥ, ಬಲಭದ್ರ ಹಾಗೂ ದೇವಿ ಸುಭದ್ರೆಯ ವಾರ್ಷಿಕ ರಥಯಾತ್ರೆ ಇಂದು ಭಕ್ತಿ, ಶ್ರದ್ಧೆ ಮತ್ತು ಸಾಂಪ್ರದಾಯಿಕ ಸಂಭ್ರಮದೊಂದಿಗೆ ನಡೆಯುತ್ತಿದೆ. ರಾಜ್ಯದ ಪ್ರಮುಖ ಆಚರಣೆ ರಾಂಚಿಯ ಧುರ್ವಾದಲ್ಲಿರುವ ಐತಿಹಾಸಿಕ ಜಗನ್ನಾಥಪುರ ದೇವಾಲಯದಲ್ಲಿ ನಡೆಯುತ್ತಿದ್ದು, ಮುಂಜಾನೆಯಿಂದಲೇ ವಿಶೇಷ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ.
ಮಧ್ಯಾಹ್ನ ದೇವರುಗಳನ್ನು ಸಂಪ್ರದಾಯಬದ್ಧವಾಗಿ ರಥಾರೋಹಣಗೊಳಿಸಿದ ಬಳಿಕ, ಸಂಜೆ 5.01 ಗಂಟೆಗೆ ರಥಯಾತ್ರೆ ಮೌಸಿಬಾರಿ ದೇವಸ್ಥಾನದ ಕಡೆಗೆ ಭವ್ಯ ಮೆರವಣಿಗೆಯೊಂದಿಗೆ ಹೊರಡಲಿದೆ.
ರಥಯಾತ್ರೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ, ಜಿಲ್ಲಾ ಆಡಳಿತವು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಜಾತ್ರಾ ಪ್ರದೇಶದಾದ್ಯಂತ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದೇ ವೇಳೆ, ಹಜಾರಿಬಾಗ್‌ನಲ್ಲಿ ಇಸ್ಕಾನ್ (ISKCON) ವತಿಯಿಂದ 40 ಅಡಿ ಎತ್ತರದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ರಥದಲ್ಲಿ ರಥಯಾತ್ರೆ ಆಯೋಜಿಸಲಾಗಿದೆ. ಈ ರಥವನ್ನು ಐಐಟಿ (IIT) ತಜ್ಞರ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಕೊಲ್ಕತ್ತಾದ ಸಾಂಸ್ಕೃತಿಕ ತಂಡವು ವಿಶೇಷ ಕಲಾ ಪ್ರದರ್ಶನಗಳನ್ನು ನೀಡಲಿದೆ.
ಖುಂಟಿ ಜಿಲ್ಲೆಯ ಬುಂಡು-ಪಂಚಪರ್ಗಣಾ ಪ್ರದೇಶದ ಐತಿಹಾಸಿಕ ರಥಮೇಳದ ಹಿನ್ನೆಲೆಯಲ್ಲಿ ಉಪವಿಭಾಗ ಆಡಳಿತವು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದೆ. ಜೊತೆಗೆ ಸರೈಕೆಲಾ, ದುಂಕಾ ಹಾಗೂ ಜಂಶೆಡ್‌ಪುರ ಸೇರಿದಂತೆ ರಾಜ್ಯದ ಪ್ರಮುಖ ಜಗನ್ನಾಥ ದೇವಾಲಯಗಳ ಸುತ್ತಮುತ್ತ ಭಕ್ತರ ಸಂಚಾರ ಸುಗಮವಾಗಲು ವಿಶೇಷ ಸಂಚಾರ ಮಾರ್ಗ ಬದಲಾವಣೆ (ಟ್ರಾಫಿಕ್ ಡೈವರ್ಷನ್) ವ್ಯವಸ್ಥೆ ಜಾರಿಗೊಳಿಸಲಾಗಿದೆ.


