ಇಂಡೋನೇಷ್ಯಾ ಸಂಸತ್ತಿನಲ್ಲಿ ಮೋದಿ ಐತಿಹಾಸಿಕ ಭಾಷಣ; ಮೊದಲ ಭಾರತೀಯ ಪ್ರಧಾನಿಯಾಗಿ ಹೊಸ ದಾಖಲೆ

1 Min Read
1 Min Read

ಜಕಾರ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಮಂತ್ರಿಯಾಗಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಇಂಡೋನೇಷ್ಯಾ ಸಂಸತ್ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು ಸಾವಿರಾರು ವರ್ಷಗಳ ನಾಗರಿಕತೆಯ ಪರಂಪರೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಭವಿಷ್ಯದ ಹಂಚಿಕೆಯ ದೃಷ್ಟಿಕೋನದ ಮೇಲೆ ನಿರ್ಮಿತವಾಗಿದೆ ಎಂದು ಹೇಳಿದರು.

ಭಾರತವನ್ನು “ಪ್ರಜಾಪ್ರಭುತ್ವದ ತಾಯಿ” ಎಂದು ಬಣ್ಣಿಸಿದ ಅವರು, ಇಂಡೋನೇಷ್ಯಾದೊಂದಿಗೆ ಪ್ರಜಾಸತ್ತಾತ್ಮಕ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದರು. ಎರಡೂ ರಾಷ್ಟ್ರಗಳು ಶತಮಾನಗಳ ಇತಿಹಾಸ, ಸಮುದ್ರ ಸಂಪರ್ಕ ಹಾಗೂ ಸಾಂಸ್ಕೃತಿಕ ಬಾಂಧವ್ಯದಿಂದ ಒಂದಾಗಿರುವ ವಿಶ್ವಾಸಾರ್ಹ ಹಾಗೂ ಸಹಜ ಪಾಲುದಾರ ರಾಷ್ಟ್ರಗಳಾಗಿವೆ ಎಂದು ಹೇಳಿದರು.

ಭಾರತ ಮಹಾಸಾಗರದ ಮೂಲಕ ಕಳೆದ ಎರಡು ಸಾವಿರ ವರ್ಷಗಳಿಂದ ನಡೆದುಕೊಂಡು ಬಂದ ವ್ಯಾಪಾರ, ಸಂಸ್ಕೃತಿ, ವಿಚಾರ ವಿನಿಮಯ ಮತ್ತು ಧಾರ್ಮಿಕ ಬಾಂಧವ್ಯವೇ ಇಂದಿನ ಬಲಿಷ್ಠ ಸಂಬಂಧಕ್ಕೆ ಅಡಿಪಾಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

‘ವಸುದೈವ ಕುಟುಂಬಕಂ’ ಎಂಬ ಭಾರತದ ತತ್ವ ಹಾಗೂ ಇಂಡೋನೇಷ್ಯಾದ ರಾಷ್ಟ್ರೀಯ ಧ್ಯೇಯವಾಕ್ಯ ‘ಭಿನ್ನೇಕ ತುಂಗ್ಗಲ್ ಇಕಾ’ (ವೈವಿಧ್ಯತೆಯಲ್ಲಿ ಏಕತೆ) ಎರಡೂ ರಾಷ್ಟ್ರಗಳ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೌಲ್ಯಗಳಾಗಿವೆ ಎಂದು ಅವರು ತಿಳಿಸಿದರು.

ಇತಿಹಾಸ, ಅಭಿವೃದ್ಧಿಯ ಸವಾಲುಗಳು ಮತ್ತು ಜನರ ಆಶಯಗಳು ಭಾರತ ಹಾಗೂ ಇಂಡೋನೇಷ್ಯಾವನ್ನು ಕಾರ್ಯತಂತ್ರದ ಪಾಲುದಾರ ರಾಷ್ಟ್ರಗಳನ್ನಾಗಿ ರೂಪಿಸಿವೆ ಎಂದು ಪ್ರಧಾನಿ ಹೇಳಿದರು.

ವಿಕಸಿತ ಭಾರತ–2047 ಹಾಗೂ ಗೋಲ್ಡನ್ ಇಂಡೋನೇಷ್ಯಾ–2045 ಗುರಿಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ವ್ಯಾಪಾರ, ಹೂಡಿಕೆ, ಸಂಪರ್ಕ ವ್ಯವಸ್ಥೆ, ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ವಿಸ್ತರಿಸುವಂತೆ ಕರೆ ನೀಡಿದರು.

ಜಾಗತಿಕ ದಕ್ಷಿಣ ರಾಷ್ಟ್ರಗಳ ಧ್ವನಿಯನ್ನು ಮತ್ತಷ್ಟು ಬಲಪಡಿಸುವುದು, ಮುಕ್ತ, ಸಮಗ್ರ ಮತ್ತು ನಿಯಮಾಧಾರಿತ ಇಂಡೋ-ಪೆಸಿಫಿಕ್ ಪ್ರದೇಶ ನಿರ್ಮಾಣಕ್ಕೆ ಭಾರತವು ಇಂಡೋನೇಷ್ಯಾದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.

Share This Article