‘ಆಪರೇಷನ್ ಸಿಂಧೂರ್’ದ ಸ್ಪಷ್ಟ ಸಂದೇಶ: ಭಾರತಕ್ಕೆ ಯುದ್ಧ ಬೇಡ, ಆದರೆ ಭಯೋತ್ಪಾದನೆ ಸಹಿಸುವುದಿಲ್ಲ

2 Min Read
2 Min Read

ನವದೆಹಲಿ: ಕಳೆದ 12 ವರ್ಷಗಳಲ್ಲಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ ಎಂಬ ತತ್ವಗಳಡಿ ಭಾರತ ಮಹತ್ವದ ಪರಿವರ್ತನೆ ಕಂಡಿದ್ದು, ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.

ಕಳೆದ ವರ್ಷದ ಮೇ 6 ಮತ್ತು 7ರ ಮಧ್ಯರಾತ್ರಿ ಕೈಗೊಳ್ಳಲಾದ ‘ಆಪರೇಷನ್ ಸಿಂಧೂರ್’ ಮೂಲಕ ಭಾರತವು ವಿಶ್ವಕ್ಕೆ ಸ್ಪಷ್ಟ ಸಂದೇಶ ರವಾನಿಸಿತ್ತು. ಭಾರತಕ್ಕೆ ಯುದ್ಧ ಬೇಡವಾದರೂ, ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂಬುದನ್ನು ಈ ಕಾರ್ಯಾಚರಣೆ ಜಗತ್ತಿಗೆ ತೋರಿಸಿಕೊಟ್ಟಿತು.

ಈ ಕಾರ್ಯಾಚರಣೆಯ ಮೂಲಕ ಭಯೋತ್ಪಾದನೆಯನ್ನು ರಾಜ್ಯ ನೀತಿಯಾಗಿ ಬಳಸುವವರಿಗೆ ನೇರ ಹಾಗೂ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂಬ ಹೊಸ ಕೆಂಪು ಗೆರೆಯನ್ನು (Red Line) ಭಾರತ ಎಳೆದಿತ್ತು.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿದ್ದ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳ ಒಂಬತ್ತು ಪ್ರಮುಖ ಉಗ್ರ ನೆಲೆಗಳನ್ನು ಭಾರತ ಯಶಸ್ವಿಯಾಗಿ ಧ್ವಂಸಗೊಳಿಸಿತ್ತು. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು ಎಂದು ವರದಿಗಳು ತಿಳಿಸಿವೆ.

ಮೇ 9 ಮತ್ತು 10ರಂದು ನಡೆದ ಮುಂದಿನ ಕ್ರಮಗಳಲ್ಲಿ, ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರದ 11 ವಾಯುನೆಲೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇದರಿಂದ ಪಾಕಿಸ್ತಾನ ವಾಯುಪಡೆಯ ಮೂಲಸೌಕರ್ಯದ ಸುಮಾರು 20 ಪ್ರತಿಶತ ಭಾಗ ಹಾನಿಗೊಳಗಾಯಿತು ಎಂದು ತಿಳಿಸಲಾಗಿದೆ.

ಈ ಕಾರ್ಯಾಚರಣೆಗೆ ಜಾಗತಿಕ ಮಟ್ಟದಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅನೇಕ ರಾಷ್ಟ್ರಗಳ ನಾಯಕರು ಭಾರತದ ಕ್ರಮವನ್ನು ಬೆಂಬಲಿಸಿದ್ದರು. ಇದು ವಿಶ್ವ ವೇದಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ ಮತ್ತು ವಿಶ್ವಾಸಾರ್ಹತೆಯನ್ನು ಪ್ರತಿಬಿಂಬಿಸುತ್ತದೆ.

ಇದೇ ವೇಳೆ, ಏಳು ನೆರೆಯ ರಾಷ್ಟ್ರಗಳೊಂದಿಗೆ ಸಂಪರ್ಕ ಹೊಂದಿರುವ 15 ಸಾವಿರ ಕಿಲೋಮೀಟರ್‌ಗಿಂತ ಹೆಚ್ಚಿನ ಭೂ ಗಡಿಯನ್ನು ಸುರಕ್ಷಿತಗೊಳಿಸಲು ಭಾರತ ‘ರಾಷ್ಟ್ರ ಮೊದಲೇ’ (Nation First) ಎಂಬ ತತ್ವದಡಿ ಪರಿಣಾಮಕಾರಿ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಗಡಿ ಬೇಲಿ ನಿರ್ಮಾಣ ಕಾರ್ಯಕ್ಕೂ ವೇಗ ನೀಡಲಾಗಿದೆ. ಜೊತೆಗೆ, ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಗೆ ಎನ್‌ಡಿಎ ಸರ್ಕಾರ ಬದ್ಧವಾಗಿದ್ದು, ದೇಶದ ಭದ್ರತೆ ಮತ್ತು ಸಾರ್ವಭೌಮತ್ವದ ರಕ್ಷಣೆಗೆ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ಪುನರುಚ್ಚರಿಸಿದೆ.

Share This Article
Leave a Comment