ನವದೆಹಲಿ: ದೇಶದ ಸಹಕಾರ ಚಳವಳಿ ಸುಧಾರಣೆ, ಡಿಜಿಟಲೀಕರಣ ಮತ್ತು ವೃತ್ತಿಪರ ನಿರ್ವಹಣೆಯ ಮೂಲಕ ಹೊಸ ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಹಕಾರ ಸಚಿವಾಲಯದ 5ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ವಿವಿಧ ಪ್ರದೇಶಗಳಲ್ಲಿನ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುವ ಐದು ಸಹಕಾರ ಸಂಸ್ಥೆಗಳನ್ನು ಗುರುತಿಸಿ ರ‍್ಯಾಂಕಿಂಗ್ ನೀಡುವ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಘೋಷಿಸಿದರು. ಇದರಿಂದ ಉತ್ತಮ ಸಾಧನೆ ಮಾಡಿದ ಸಂಸ್ಥೆಗಳಿಗೆ ಪ್ರೋತ್ಸಾಹ ದೊರೆಯಲಿದ್ದು, ಇತರೆ ಸಂಸ್ಥೆಗಳಿಗೂ ಮಾದರಿಯಾಗಲಿವೆ ಎಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (PACS) ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಮಾದರಿ ಉಪನಿಯಮಗಳನ್ನು ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿದ್ದು, ಅವುಗಳ ಸೇವಾ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ ಎಂದರು.
ರೈತರು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಮಿತ್ ಶಾ ಮನವಿ ಮಾಡಿದರು.
ಕಳೆದ ಐದು ವರ್ಷಗಳಲ್ಲಿ ‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯದೊಂದಿಗೆ ಸಹಕಾರ ಸಚಿವಾಲಯ ಕೋಟ್ಯಂತರ ಜನರ ಬದುಕಿನಲ್ಲಿ ಬದಲಾವಣೆ ತರಲು ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ದೇಶದಲ್ಲಿ 30 ಕೋಟಿಗೂ ಅಧಿಕ ಸಹಕಾರ ಸದಸ್ಯರು ಹಾಗೂ 8.5 ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಈ ಕ್ಷೇತ್ರದ ಶಕ್ತಿಯಾಗಿವೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದ ನಂತರ, ಸಹಕಾರ ವ್ಯವಸ್ಥೆಯನ್ನು ಆಧುನಿಕ, ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಸ್ಪರ್ಧಾತ್ಮಕವಾಗಿ ರೂಪಿಸುವ ದಿಸೆಯಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ, ರಾಷ್ಟ್ರೀಯ ಸಹಕಾರಿ ಬೀಜ ಸಮಿತಿ ಮುಂದಿನ ಮೂರು ವರ್ಷಗಳಲ್ಲಿ ದೇಶದ ಅತಿದೊಡ್ಡ ಸರ್ಕಾರೇತರ ಬೀಜ ಉತ್ಪಾದನಾ ಸಂಸ್ಥೆಯಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರೈತರಿಗೆ ಶುದ್ಧ ಹಾಗೂ ಕಲಬೆರಕೆಯಿಲ್ಲದ ಬೀಜ, ಹೆಚ್ಚಿನ ಇಳುವರಿ ನೀಡುವ ಸುಧಾರಿತ ತಳಿಗಳ ಅಭಿವೃದ್ಧಿ ಮತ್ತು ಭಾರತೀಯ ಸಾಂಪ್ರದಾಯಿಕ ಬೀಜಗಳ ಸಂರಕ್ಷಣೆ ಇದರ ಪ್ರಮುಖ ಉದ್ದೇಶಗಳಾಗಿವೆ ಎಂದು ತಿಳಿಸಿದರು.
ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಮೂಲಕ ಬ್ಯಾಂಕಿಂಗ್, ಹೈನುಗಾರಿಕೆ, ಕೃಷಿ, ಮಾರುಕಟ್ಟೆ, ರಸಗೊಬ್ಬರ ಸೇರಿದಂತೆ ವಿವಿಧ ಸಹಕಾರ ಕ್ಷೇತ್ರಗಳಿಗೆ ವೃತ್ತಿಪರ ತಜ್ಞರನ್ನು ಸಿದ್ಧಪಡಿಸಲಾಗುವುದು. ಅರ್ಹತೆ ಆಧಾರಿತ ನೇಮಕಾತಿಯಿಂದ ಪಾರದರ್ಶಕತೆ ಹೆಚ್ಚಿ, ಕಾರ್ಯಕ್ಷಮತೆ ವೃದ್ಧಿಯಾಗುವುದರ ಜೊತೆಗೆ ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೂ ತಡೆ ಬೀಳಲಿದೆ ಎಂದು ಅಮಿತ್ ಶಾ ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮಜಯಂತಿಯನ್ನು ಸ್ಮರಿಸಿದ ಅಮಿತ್ ಶಾ, ರಾಷ್ಟ್ರದ ಏಕತೆ ಮತ್ತು ಅಖಂಡತೆಗೆ ಅವರು ಸಲ್ಲಿಸಿದ ಕೊಡುಗೆ ಅಪಾರವಾಗಿದೆ ಎಂದರು. “ಒಂದು ರಾಷ್ಟ್ರಕ್ಕೆ ಎರಡು ಸಂವಿಧಾನ, ಎರಡು ಪ್ರಧಾನಮಂತ್ರಿ ಮತ್ತು ಎರಡು ಧ್ವಜ ಇರಲು ಸಾಧ್ಯವಿಲ್ಲ” ಎಂಬ ಅವರ ತತ್ವ ದೇಶದ ಏಕೀಕರಣಕ್ಕೆ ದಿಕ್ಕು ತೋರಿದ ಘೋಷಣೆಯಾಗಿದೆ ಎಂದು ಹೇಳಿದರು.


