ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನ ಹಾಗೂ ಗುಜರಾತ್‌ಗೆ ಒಂದು ದಿನದ ಪ್ರವಾಸ ಕೈಗೊಂಡಿದ್ದು, ಎರಡೂ ರಾಜ್ಯಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೊದಲಿಗೆ ರಾಜಸ್ಥಾನದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಸುಮಾರು ₹480 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಟರ್ಮಿನಲ್ ವರ್ಷಕ್ಕೆ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದೇ ವೇಳೆ ಪರಿಷ್ಕೃತ ಉಡಾನ್ (UDAN) ಯೋಜನೆಗೂ ಚಾಲನೆ ನೀಡಿ, ಪ್ರಾದೇಶಿಕ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದ್ದಾರೆ.
ಬಳಿಕ ಬಾಲೋತ್ರಾದಲ್ಲಿ ಸುಮಾರು ₹1.06 ಲಕ್ಷ ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ. ಪೆಟ್ರೋಕೆಮಿಕಲ್ಸ್, ನಗರ ಸಾರಿಗೆ, ರೈಲ್ವೆ, ರಸ್ತೆ, ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ಪ್ರಸರಣ ಸೇರಿದಂತೆ ಹಲವು ಕ್ಷೇತ್ರಗಳ ಯೋಜನೆಗಳು ಇದರಲ್ಲಿ ಸೇರಿವೆ.
ದೇಶದ ಮೊದಲ ಗ್ರೀನ್‌ಫೀಲ್ಡ್ ರಿಫೈನರಿ ರಾಷ್ಟ್ರಕ್ಕೆ ಸಮರ್ಪಣೆ
ಬಾಲೋತ್ರಾದ ಪಚ್‌ಪದ್ರಾದಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಗ್ರೀನ್‌ಫೀಲ್ಡ್ ಸಮಗ್ರ ರಿಫೈನರಿ-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ಭಾರತದ ಇಂಧನ ಹಾಗೂ ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹಾಗೂ ರಾಜಸ್ಥಾನ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಈ ಯೋಜನೆಗೆ ₹79,450 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ. ವಾರ್ಷಿಕ 9 ಮಿಲಿಯನ್ ಮೆಟ್ರಿಕ್ ಟನ್ (MMTPA) ಸಾಮರ್ಥ್ಯದ ಈ ಘಟಕವು ಪಶ್ಚಿಮ ರಾಜಸ್ಥಾನದಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.
ಜೈಪುರ ಮೆಟ್ರೋ 2ನೇ ಹಂತಕ್ಕೂ ಶಂಕುಸ್ಥಾಪನೆ
ಪ್ರಧಾನಿ ಮೋದಿ ₹13 ಸಾವಿರ ಕೋಟಿ ವೆಚ್ಚದ ಜೈಪುರ ಮೆಟ್ರೋ 2ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಯೋಜನೆಯಡಿ 41 ಕಿ.ಮೀ. ಉದ್ದದ ಉತ್ತರ-ದಕ್ಷಿಣ ಮೆಟ್ರೋ ಕಾರಿಡಾರ್ ನಿರ್ಮಾಣವಾಗಲಿದ್ದು, ಪ್ರಹ್ಲಾದ್‌ಪುರದಿಂದ ತೋಡಿ ಮೋಡ್‌ವರೆಗೆ 36 ನಿಲ್ದಾಣಗಳ ಮೂಲಕ ಕೈಗಾರಿಕಾ ಹಾಗೂ ವಸತಿ ಪ್ರದೇಶಗಳನ್ನು ಸಂಪರ್ಕಿಸಲಿದೆ.
ಇದೇ ವೇಳೆ ಚುರು–ಸದುಲ್ಪುರ್ ಹಾಗೂ ಚುರು–ರತನ್‌ಗಢ ರೈಲು ಮಾರ್ಗ ದ್ವಿಪಥ ಯೋಜನೆ, ರಾಷ್ಟ್ರೀಯ ಹೆದ್ದಾರಿ-125A ನಾಲ್ಕು ಪಥ ವಿಸ್ತರಣೆ, 1,000 ಮೆಗಾವಾಟ್ ಬಿಕಾನೇರ್ ಸೌರ ವಿದ್ಯುತ್ ಯೋಜನೆ ಹಾಗೂ ನವೀಕರಿಸಬಹುದಾದ ಇಂಧನ ವಲಯಕ್ಕೆ ಸಂಬಂಧಿಸಿದ ವಿದ್ಯುತ್ ಪ್ರಸರಣ ಯೋಜನೆಗಳನ್ನೂ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ರಾಜಸ್ಥಾನ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡಿರುವ ಸುಮಾರು 54 ಸಾವಿರ ಯುವಕರಿಗೆ ನೇಮಕಾತಿ ಪತ್ರಗಳನ್ನೂ ಪ್ರಧಾನಿ ವಿತರಿಸಲಿದ್ದಾರೆ.
ಸಂಜೆ ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ ಘಟಕ ಉದ್ಘಾಟನೆ
ಸಂಜೆ ಪ್ರಧಾನಿ ಮೋದಿ ಗುಜರಾತ್‌ನ ಅಹಮದಾಬಾದ್ ಸಮೀಪದ ಸಾನಂದ್ನಲ್ಲಿ CG Semi OSAT (Outsourced Semiconductor Assembly and Test) ಘಟಕವನ್ನು ಉದ್ಘಾಟಿಸಲಿದ್ದಾರೆ.
ಭಾರತ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಅನುಮೋದನೆ ಪಡೆದ ಮೊದಲ ನಾಲ್ಕು ಯೋಜನೆಗಳಲ್ಲಿ ಇದೂ ಒಂದಾಗಿದ್ದು, ಸುಮಾರು ₹7,500 ಕೋಟಿ ಹೂಡಿಕೆಯಲ್ಲಿ ನಿರ್ಮಾಣಗೊಂಡಿದೆ.
ವಾರ್ಷಿಕ 5 ಬಿಲಿಯನ್ ಸೆಮಿಕಂಡಕ್ಟರ್ ಚಿಪ್‌ಗಳ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಘಟಕವು ವೇಫರ್ ಸೋರ್ಟಿಂಗ್, ಪ್ಯಾಕೇಜಿಂಗ್, ಪರೀಕ್ಷೆ ಹಾಗೂ ವೈಫಲ್ಯ ವಿಶ್ಲೇಷಣೆ ಸೇರಿದಂತೆ ಸಂಪೂರ್ಣ ಸೇವೆಗಳನ್ನು ಒದಗಿಸಲಿದೆ.
ವಾಹನೋದ್ಯಮ, ಕೈಗಾರಿಕಾ ಸ್ವಯಂಚಾಲನೆ, 5G, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಹಾಗೂ ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳಿಗೆ ಅಗತ್ಯವಿರುವ ಅತ್ಯಾಧುನಿಕ ಚಿಪ್‌ಗಳ ಉತ್ಪಾದನೆಯಲ್ಲಿ ಈ ಘಟಕ ಪ್ರಮುಖ ಪಾತ್ರವಹಿಸಲಿದೆ.


