ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿರುವ ಕೇಂದ್ರ ಸರ್ಕಾರ, ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ 23 ಮಂದಿಯನ್ನು ಅಧಿಕೃತವಾಗಿ ‘ಭಯೋತ್ಪಾದಕರು’ ಎಂದು ಘೋಷಿಸಿದೆ.
ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಇವರು ಜೈಶ್-ಎ-ಮೊಹಮ್ಮದ್ (JeM), ಲಷ್ಕರ್-ಎ-ತೊಯ್ಬಾ (LeT) ಸೇರಿದಂತೆ ಹಲವು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ದೇಶದ ಭದ್ರತೆಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಸರ್ಕಾರವು ದೇಶ ಮತ್ತು ದೇಶದ ನಾಗರಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಂದು ಉಗ್ರ ಜಾಲವನ್ನು ಸಂಪೂರ್ಣವಾಗಿ ನಾಶಪಡಿಸಲು ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಆಕಾಶವಾಣಿ ವರದಿಯ ಪ್ರಕಾರ, ಉಗ್ರರೆಂದು ಘೋಷಿಸಲಾದ 23 ಮಂದಿಯಲ್ಲಿ 17 ಮಂದಿ ಪಾಕಿಸ್ತಾನದ ಪ್ರಜೆಗಳಾಗಿದ್ದು, 6 ಮಂದಿ ಭಾರತೀಯ ಮೂಲದವರಾಗಿದ್ದಾರೆ. ಆದರೆ ಪ್ರಸ್ತುತ ಎಲ್ಲರೂ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoJK) ಪ್ರದೇಶಗಳಿಂದಲೇ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಈ ವ್ಯಕ್ತಿಗಳು ಭಾರತ ವಿರೋಧಿ ಸಂಚು ರೂಪಿಸುವುದು, ಉಗ್ರ ದಾಳಿಗಳನ್ನು ನಡೆಸುವುದು, ಭಯೋತ್ಪಾದನೆಗೆ ಪ್ರಚೋದನೆ ನೀಡುವುದು, ಶಸ್ತ್ರಾಸ್ತ್ರ ಕಳ್ಳಸಾಗಣೆ, ಗಡಿ ನುಸುಳಿಕೆ, ಉಗ್ರ ಸಂಘಟನೆಗಳಿಗೆ ನೆರವು, ಹಣ ಸಂಗ್ರಹ ಹಾಗೂ ಉಗ್ರರ ನೇಮಕಾತಿ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಘೋಷಣೆಯೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಅವರ ಆರ್ಥಿಕ ಮೂಲಗಳನ್ನು ಸ್ಥಗಿತಗೊಳಿಸುವುದು, ಶಸ್ತ್ರಾಸ್ತ್ರ ಪೂರೈಕೆಗೆ ನಿರ್ಬಂಧ ಹೇರುವುದು ಹಾಗೂ ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರ ಲಭ್ಯವಾಗಲಿದೆ.
2019ರಲ್ಲಿ ಜಾರಿಗೆ ಬಂದ UAPA ತಿದ್ದುಪಡಿಯ ನಂತರ, ಕೇಂದ್ರ ಸರ್ಕಾರ ಇದುವರೆಗೆ ಒಟ್ಟು 80 ಮಂದಿಯನ್ನು ಭಯೋತ್ಪಾದಕರಾಗಿ ಘೋಷಿಸಿದೆ. ಈ ತಿದ್ದುಪಡಿಯಿಂದ ಸಂಘಟನೆಗಳಷ್ಟೇ ಅಲ್ಲ, ವ್ಯಕ್ತಿಗಳನ್ನೂ ನೇರವಾಗಿ ಉಗ್ರರೆಂದು ಘೋಷಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ದೊರೆತಿದೆ.


