ಒಯಾರ್ಜಾಬಲ್ ಮಿಂಚು; ಆಸ್ಟ್ರಿಯಾವನ್ನು ಮಣಿಸಿ ಸ್ಪೇನ್ 16ರ ಘಟ್ಟಕ್ಕೆ

1 Min Read
1 Min Read

ಫಿಫಾ ವಿಶ್ವಕಪ್: ಆಸ್ಟ್ರಿಯಾ ವಿರುದ್ಧ ಸ್ಪೇನ್‌ಗೆ 3-0 ಭರ್ಜರಿ ಜಯ, ಪ್ರೀಕ್ವಾರ್ಟರ್‌ಗೆ ಲಗ್ಗೆ

ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ 32ರ ಘಟ್ಟದ ಪಂದ್ಯದಲ್ಲಿ ಸ್ಪೇನ್ ತಂಡ ಆಸ್ಟ್ರಿಯಾವನ್ನು 3-0 ಗೋಲುಗಳಿಂದ ಮಣಿಸಿ ಪ್ರೀಕ್ವಾರ್ಟರ್‌ (ರೌಂಡ್ ಆಫ್ 16) ಪ್ರವೇಶಿಸಿದೆ. ಕ್ಯಾಲಿಫೋರ್ನಿಯಾದ ಇಂಗಲ್‌ವುಡ್‌ನ ಲಾಸ್ ಏಂಜಲೀಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ಆರಂಭದಿಂದಲೇ ಮೇಲುಗೈ ಸಾಧಿಸಿತು.

ಸ್ಪೇನ್ ಪರ ಮಿಕೆಲ್ ಒಯಾರ್ಜಾಬಲ್ 36ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ ಪೆಡ್ರೊ ಪೊರೊ 66ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಪಂದ್ಯದ 89ನೇ ನಿಮಿಷದಲ್ಲಿ ಒಯಾರ್ಜಾಬಲ್ ಮತ್ತೊಮ್ಮೆ ಗೋಲು ದಾಖಲಿಸುವ ಮೂಲಕ ವೈಯಕ್ತಿಕವಾಗಿ ಎರಡು ಗೋಲುಗಳ ಸಾಧನೆ ಮಾಡಿದರು ಹಾಗೂ ಸ್ಪೇನ್‌ಗೆ 3-0 ಅಂತರದ ಸುಲಭ ಗೆಲುವು ತಂದುಕೊಟ್ಟರು.

ಈ ಗೆಲುವಿನೊಂದಿಗೆ ಸ್ಪೇನ್ ಇದೀಗ ರೌಂಡ್ ಆಫ್ 16ರಲ್ಲಿ ಪೋರ್ಚುಗಲ್ ಅಥವಾ ಕ್ರೊಯೇಷ್ಯಾ ವಿರುದ್ಧ ಸೆಣಸಲಿದೆ.

ಇದಕ್ಕೂ ಮುನ್ನ ಬೆಲ್ಜಿಯಂ, ಆತಿಥೇಯ ಅಮೆರಿಕ ಹಾಗೂ ಇಂಗ್ಲೆಂಡ್ ತಂಡಗಳು ರೌಂಡ್ ಆಫ್ 16ಕ್ಕೆ ಪ್ರವೇಶಿಸಿವೆ. ಇಂಗ್ಲೆಂಡ್ ತಂಡ ಸೋಮವಾರ ಸಹ ಆತಿಥೇಯ ಮೆಕ್ಸಿಕೊ ವಿರುದ್ಧ ಆಡಲಿದ್ದು, ಅಮೆರಿಕ ಮಂಗಳವಾರ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ಇದಲ್ಲದೆ ಫ್ರಾನ್ಸ್, ನಾರ್ವೆ, ಕೆನಡಾ, ಮೊರೊಕ್ಕೊ, ಬ್ರೆಜಿಲ್ ಹಾಗೂ ಪರಾಗ್ವೆ ತಂಡಗಳೂ ಪ್ರೀಕ್ವಾರ್ಟರ್‌ಗೆ ಅರ್ಹತೆ ಪಡೆದಿವೆ.

Share This Article