85 ಪದಕಗಳ ಸಾಧನೆಯೊಂದಿಗೆ ಭಾರತ: ಇಂದು ಐಚಿ–ನಾಗೋಯಾ ಏಷ್ಯನ್ ಗೇಮ್ಸ್‌ಗೆ ತೆರೆ

1 Min Read
1 Min Read

ನಾಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ–ನಾಗೋಯಾ ಏಷ್ಯನ್ ಗೇಮ್ಸ್ 2026 ಕ್ರೀಡಾಕೂಟಕ್ಕೆ ಇಂದು ಸಮಾರೋಪ ಸಮಾರಂಭದೊಂದಿಗೆ ತೆರೆ ಬೀಳಲಿದೆ. ಎರಡು ವಾರಕ್ಕೂ ಹೆಚ್ಚು ಕಾಲ ನಡೆದ ಕ್ರೀಡಾ ಸಂಭ್ರಮದ ಅಂತಿಮ ಕಾರ್ಯಕ್ರಮವು ನಾಗೋಯಾ ಸಿಟಿ ಮಿಜುಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಇದೇ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭವೂ ನಡೆದಿತ್ತು.

85 ಪದಕಗಳೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಟ್ಟು 85 ಪದಕಗಳನ್ನು ಗೆದ್ದು ಅಂತಿಮ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಭಾರತದ ಖಾತೆಯಲ್ಲಿ 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚಿನ ಪದಕಗಳು ಸೇರಿವೆ.

ಕ್ರೀಡಾಕೂಟದ ಅಂತಿಮ ಹಂತದಲ್ಲಿ ಭಾರತಕ್ಕೆ ಹಾಕಿ, ಕ್ರಿಕೆಟ್ ಮತ್ತು ಕುಸ್ತಿಯಂತಹ ವಿಭಾಗಗಳಲ್ಲಿ ಚಿನ್ನದ ಪದಕಗಳು ಒಲಿದಿದ್ದು, ಒಟ್ಟಾರೆ ಪದಕ ಸಂಖ್ಯೆಯನ್ನು 85ಕ್ಕೆ ತಲುಪಿಸಲು ನೆರವಾದವು.

ನೀರು ಧಂಡಾಗೆ ವಿಶೇಷ ಗೌರವ

ಭಾರತದ ಪರ ಸಮಾರೋಪ ಸಮಾರಂಭದಲ್ಲಿ ಮಹಿಳಾ ಧ್ವಜಧಾರಿಯಾಗಿ ಶೂಟರ್ ನೀರು ಧಂಡಾ ತ್ರಿವರ್ಣ ಧ್ವಜವನ್ನು ಹಿಡಿದು ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.

ಐಚಿ–ನಾಗೋಯಾ ಕ್ರೀಡಾಕೂಟದಲ್ಲಿ ನೀರು ಧಂಡಾ ಗಮನಾರ್ಹ ಪ್ರದರ್ಶನ ನೀಡಿದ್ದು, ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಅವರು, ಮಿಶ್ರ ಟ್ರ್ಯಾಪ್ ತಂಡದಲ್ಲೂ ಚಿನ್ನದ ಪದಕ ಪಡೆದಿದ್ದಾರೆ.

ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ತೆರೆ

ಸಮಾರೋಪ ಸಮಾರಂಭದಲ್ಲಿ ವಿವಿಧ ದೇಶಗಳ ಕ್ರೀಡಾಪಟುಗಳ ಪಥಸಂಚಲನ ಸೇರಿದಂತೆ ಏಷ್ಯನ್ ಗೇಮ್ಸ್‌ನ ಸಾಂಪ್ರದಾಯಿಕ ಸಮಾರೋಪ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ 2026ರ ಐಚಿ–ನಾಗೋಯಾ ಏಷ್ಯನ್ ಗೇಮ್ಸ್ ಅಧಿಕೃತವಾಗಿ ಅಂತ್ಯಗೊಳ್ಳಲಿದೆ.

Share This Article