ಕೆನಡಾ ಓಪನ್ನಲ್ಲಿ ಭಾರತದ ಸವಾಲು ಅಂತ್ಯ; ತಾನ್ಯಾ ಹೇಮನಾಥ್ ದ್ವಿತೀಯ ಸುತ್ತಿನಲ್ಲಿ ನಿರ್ಗಮನ
ಕೆನಡಾದ ಮಾರ್ಕ್ಹ್ಯಾಮ್ನಲ್ಲಿ ನಡೆಯುತ್ತಿರುವ ಕೆನಡಾ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಮಹಿಳೆಯರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನಲ್ಲಿ ಭಾರತದ ತಾನ್ಯಾ ಹೇಮನಾಥ್ ಜಪಾನ್ನ ರಿಕೊ ಗುಂಜಿ ವಿರುದ್ಧ 21-11, 21-11 ಅಂತರದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.
ಮೊದಲ ಸುತ್ತಿನಲ್ಲಿ ತಾನ್ಯಾ, ಅಮೆರಿಕದ ದಿಶಾ ಗುಪ್ತಾ ಅವರನ್ನು 21-16, 21-18 ಅಂತರದಲ್ಲಿ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದರು.
ಇದೇ ವೇಳೆ, ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ ಆಕರ್ಷಿ ಕಶ್ಯಪ್ ಮೊದಲ ಸುತ್ತಿನಲ್ಲಿ ಫ್ರಾನ್ಸ್ನ ಅನ್ನಾ ತಾತ್ರನೋವಾ ವಿರುದ್ಧ ಗೆಲುವು ಸಾಧಿಸಿದರೂ, ದ್ವಿತೀಯ ಸುತ್ತಿನಲ್ಲಿ ಅಮೆರಿಕದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಬೈವೆನ್ ಝಾಂಗ್ ವಿರುದ್ಧ 20-22, 21-17, 21-17 ಅಂತರದಲ್ಲಿ ಸೋತು ನಿರ್ಗಮಿಸಿದರು.
ನಿನ್ನೆ ಭಾರತದ ಬ್ಯಾಡ್ಮಿಂಟನ್ ತಂಡಕ್ಕೆ ನಿರಾಸೆಯ ದಿನವಾಗಿದ್ದು, ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಒಂಬತ್ತು ಭಾರತೀಯ ಆಟಗಾರರಲ್ಲಿ ಏಳು ಮಂದಿ ಮೊದಲ ಸುತ್ತಿನಲ್ಲೇ ಹೊರಬಿದ್ದರು.
ಮಾಜಿ ವಿಶ್ವ ನಂ.1 ಆಟಗಾರ ಕಿದಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಲೀ ಝೀ ಜಿಯಾ ವಿರುದ್ಧ ಆಡುತ್ತಿದ್ದ ವೇಳೆ ಗಾಯದ ಕಾರಣ ಪಂದ್ಯದಿಂದ ನಿವೃತ್ತರಾದರು. ಆಗ ಅವರು 11-10 ಅಂತರದಲ್ಲಿ ಹಿನ್ನಡೆಯಲ್ಲಿದ್ದರು.
ಇದರೊಂದಿಗೆ ಸನೀತ್ ದಯಾನಂದ್ ಹಾಗೂ ಶಂಕರ್ ಸುಬ್ರಮಣಿಯನ್ ಕೂಡ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದು, ಕೆನಡಾ ಓಪನ್ನಲ್ಲಿ ಭಾರತದ ಸವಾಲು ಸಂಪೂರ್ಣ ಅಂತ್ಯಗೊಂಡಿದೆ.


