ಹಡಗು ಮರುಬಳಕೆ ಕ್ಷೇತ್ರದಲ್ಲಿ ಭಾರತ-ಇಯು ಸಹಕಾರಕ್ಕೆ ವೇಗ; ಕೇಂದ್ರ ಸಚಿವ ಸೊನೋವಾಲ್ ಮಾಹಿತಿ
ಭಾರತದ ಹಡಗು ಮರುಬಳಕೆ ಘಟಕಗಳನ್ನು ಯುರೋಪಿಯನ್ ಒಕ್ಕೂಟದ (EU) ಹಡಗು ಮರುಬಳಕೆ ನಿಯಮಾವಳಿ ಅಡಿಯಲ್ಲಿ ಸೇರಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಭಾರತ ಮತ್ತು ಇಯು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಬಂದರು, ಹಡಗುಸಾಗಣೆ ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೊನೋವಾಲ್ ತಿಳಿಸಿದ್ದಾರೆ.
ಯುರೋಪಿಯನ್ ಒಕ್ಕೂಟದ ಪರಿಸರ, ಜಲ ಸ್ಥಿರತೆ ಹಾಗೂ ಸ್ಪರ್ಧಾತ್ಮಕ ವೃತ್ತಾಕಾರ ಆರ್ಥಿಕತೆ ಆಯುಕ್ತೆ ಜೆಸ್ಸಿಕಾ ರೋಸ್ವಾಲ್ ಅವರೊಂದಿಗೆ ನಡೆದ ಮಾತುಕತೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಉಭಯ ದೇಶಗಳು ಸುಗಮ ಸಮನ್ವಯಕ್ಕಾಗಿ ಕಾರ್ಯಯೋಜನೆ ಕುರಿತು ಚರ್ಚೆ ನಡೆಸಿವೆ ಎಂದು ತಿಳಿಸಿದ್ದಾರೆ.
ಈ ವೇಳೆ ಜಾಗತಿಕ ಮಟ್ಟದ ಸುಸ್ಥಿರ ಮಾನದಂಡಗಳನ್ನು ಅನುಸರಿಸುವ ಬದ್ಧತೆ ಹಾಗೂ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ (FTA) ಗುರಿಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಎರಡೂ ಕಡೆಯವರು ಪುನರುಚ್ಚರಿಸಿದ್ದಾರೆ.
ಭಾರತವು ಪ್ರಸ್ತುತ ವಿಶ್ವದಲ್ಲೇ ಅತಿದೊಡ್ಡ ಹಡಗು ಮರುಬಳಕೆ ರಾಷ್ಟ್ರವಾಗಿದ್ದು, ಹಸಿರು ಸಾಗರೋದ್ಯಮದಲ್ಲಿ ಮುಂಚೂಣಿಯಲ್ಲಿದೆ ಎಂದು ಸೊನೋವಾಲ್ ಹೇಳಿದ್ದಾರೆ.
ಹಡಗು ನಿರ್ಮಾಣ ಹಾಗೂ ಹಡಗು ಮರುಬಳಕೆ ಕ್ಷೇತ್ರಕ್ಕೆ 8 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಹಣಕಾಸು ಬದ್ಧತೆ ನೀಡಲಾಗಿದ್ದು, ಮುಂದಿನ 10 ವರ್ಷಗಳಲ್ಲಿ ಸುಮಾರು 16 ಸಾವಿರ ಹಡಗುಗಳನ್ನು ಮರುಬಳಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.


